ತುಮಕೂರು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವಂತೆ ನೋಟಿಸ್ ನೀಡಲಾಗಿದ್ದು, ಬಿಲ್ ನೋಡಿದ ಮಠದ ಆಡಳಿತ ಮಂಡಳಿಯೇ ಶಾಕ್ ಆಗಿದೆ.
ನೀರಾವರಿ ವಿದ್ಯುತ್ ಬಿಲ್ ಪಾವತಿಸುವಂತೆ ಸಿದ್ಧಗಂಗಾ ಮಠಕ್ಕೆ ಕೆಐಎಡಿಬಿ- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿಯಂತರರು ಪತ್ರ ಬರೆದಿದ್ದಾರೆ. 70,31,438 ರೂ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ. ಕೆಐಎಡಿಬಿಯ ಅರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಬಿಲ್ ಭರಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೊಂದು ಪ್ರಮಾಣದ ವಿದ್ಯುತ್ ಬಿಲ್ ಕಂಡು ಮಠದ ಆಡಳಿತ ಮಂಡಳಿ ಶಾಕ್ ಆಗಿದೆ.
ಸಿದ್ಧಗಂಗಾ ಮಠಕ್ಕೆ 70 ಲಕ್ಷ ದಷ್ಟು ಬಿಲ್ ಪಾವತಿಸುವಂತೆ ಪತ್ರ ಬಂದಿರುವುದು ನಿಜ. ಆದರೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮಠದಿಂದ ಕೆಐಎಡಿಬಿಗೆ ಪತ್ರ ಬರೆಯಲಾಗಿದೆ ಎಂದು ಸಿದ್ಧಗಂಗಾ ಮಠದ ಶೀಗಳು ತಿಳಿಸಿದ್ದಾರೆ.
ಹೊನ್ನೇನಹಳ್ಳಿ ಕೆರೆಯ ನೀರನ್ನು ಸಿದ್ಧಗಂಗಾ ಮಠವೇ ಉಪಯೋಗಿಸಿಕೊಳ್ಳುತ್ತಿರುವುದರಿಂದ 70,31,438 ರೂ ಬಿಲ್ ಬಂದಿದ್ದು, ಹೀಗಾಗಿ ಮಠವೇ ಬಿಲ್ ಪಾವತಿಸಲು ಸೂಚಿಸಲಾಗಿದೆ ಎಂಬುದು ಕೆಐಎಡಿಬಿ ವಾದ. ಒಟ್ಟಾರೆ ಸಿದ್ಧಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಗೆ ಕೆಐಎಡಿಬಿ ಸೂಚನೆ ವಿಚಾರ ಹೊಸ ವಿವಾದಕ್ಕೆ ಕಾರಣವಾಗಿದೆ.