ಬೆಂಗಳೂರು: ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ಉಭಯ ನಾಯಕರು ತಮಗೇ ಸಿಎಂ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದುರುವುದರಿಂದ ಹೈಕಮಾಂಡ್ ಅಂಗಳಕ್ಕೆ ಚೆಂಡು ತಲುಪಿದೆ. ಹೈಕಮಾಂಡ್ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಉಭಯ ನಾಯಕರು ಪಟ್ಟು ಹಿಡಿದಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ಬದಲಿಗೆ ಮೂರನೇ ಆಯ್ಕೆ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮುಖಾಮುಖಿಯಾಗಿ ಚರ್ಚಿಸಿ ಸಿಎಂ ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಇಬ್ಬರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು ಅವರು ತಮ್ಮ ನಿಲುವು ಸಡಿಲಿಸದಿದ್ದಲ್ಲಿ ಮೂರನೇ ಆಯ್ಕೆಯಾಗಿ ಲಿಂಗಾಯಿತ ಸಮುದಾಯದ ಎಂ.ಬಿ. ಪಾಟೀಲ್ ಅವರಿಗೆ ಸಿಎಂ ಸ್ಥಾನ ನೀಡುವ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಳೆ ಮೈಸೂರು ಪ್ರಾಂತ್ಯದವರಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲುವಿನಲ್ಲಿ ಉತ್ತರ ಕರ್ನಾಟಕ ನಾಯಕರ ಶ್ರಮ ಇದ್ದು. ಪ್ರಮುಖವಾಗಿ ಲಿಂಗಾಯಿತ ಸಮುದಾಯದ ಮತ ಕ್ರೂಢೀಕರಣಕ್ಕೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಭಾರಿ ಪ್ರಯತ್ನವನ್ನೇ ಮಾಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಬಿಜೆಪಿ ಕೆಳಗಿಳಿಸಿದಾಗ ಸಂದರ್ಭ ಬಳಸಿಕೊಂಡು ಬಿಜೆಪಿಯಲ್ಲಿ ಲಿಂಗಾಯತ ಮುಖಂಡರಿಗೆ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದ್ದ ಎಂ.ಬಿ. ಪಾಟೀಲ್, ಲಿಂಗಾಯತರನ್ನು ಕಾಂಗ್ರೆಸ್ ಪರವಾಗಿ ತಿರುಗಿಸಿದ್ದರು.
ಈಗ ಪ್ರತಿಷ್ಠೆಗೆ ಬಿದ್ದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಸಡಿಲಿಸದಿದ್ದಲ್ಲಿ ಹೈಕಮಾಂಡ್ ಗೆ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಲಿದೆ. ಆಗ ಮೂರನೇ ವ್ಯಕ್ತಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದು ಲಿಂಗಾಯಿತರು ರೇಸ್ ನಲ್ಲಿ ಮುಂದೆ ಬರಬಹುದು. ಸಹಜವಾಗಿಯೇ ಎಂ.ಬಿ. ಪಾಟೀಲ್ ಹೆಸರು ಮುಂಚೂಣಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಮತ್ತೊಂದು ಅವಕಾಶವಾಗಿ ಈ ಹಿಂದೆ ಸಿಎಂ ಸ್ಥಾನ ಜಸ್ಟ್ ಮಿಸ್ ಆಗಿದ್ದ ಡಾ.ಜಿ. ಪರಮೇಶ್ವರ್ ಕೂಡ ಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಬೇರೆಯವರನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ಆದರೆ, ರಾಜಕಾರಣದಲ್ಲಿ ಯಾವುದನ್ನೂ ಅಲ್ಲಗಳೆಯವಂತಿಲ್ಲ ಎಂದು ಹೇಳಲಾಗಿದೆ.