
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ತೆರೆ ಎಳೆದಿದ್ದಾರೆ.
ಅಳೆದು ತೂಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಸಿದ್ದರಾಮಯ್ಯ ಅವರ ಸ್ಪರ್ಧೆಯ ಹಿಂದೆ ಏನೆಲ್ಲಾ ಲೆಕ್ಕಾಚಾರ ಇರಬಹುದು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.
ಅಂದ ಹಾಗೇ ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಲು ಹಲವು ಕಾರಣ ಮತ್ತು ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿಯಾದ ನೆಲೆ ಇಲ್ಲದೆ ಇರುವ ಕಾರಣ ಕೋಲಾರದಿಂದಲೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ವರ್ತೂರು ಪ್ರಕಾಶ್ ಬಿಜೆಪಿ ಸೇರಿದ್ದಾರೆ. ಮೊದಲಿನ ವರ್ಚಸ್ಸು, ಹಿಡಿತ ಇಲ್ಲ. ಸಚಿವರಾದ ಸುಧಾಕರ್ ಮತ್ತು ಮುನಿರತ್ನ ಒಂದು ಕಾಲದಲ್ಲಿ ತಮ್ಮ ಶಿಷ್ಯಬಳಗದಲ್ಲಿ ಇದ್ದವರು. ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿದ್ದು ತನಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಕೂಡ ಇದೆ.
ದಳ ಅಭ್ಯರ್ಥಿ ಆರ್ಥಿಕವಾಗಿ ಪ್ರಬಲವಾಗಿದ್ದರೂ ಜನರಿಗೆ ಪರಿಚಿತರಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿವೆ ದಳ ಮತ್ತೆ ತನ್ನ ಅಭ್ಯರ್ಥಿಯನ್ನು ಬದಲಿಸಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಪ್ರಬಲ ನಾಯಕ ಬೇಕೆಂಬ ಜನರ ಬಯಕೆ ಇದ್ದು, ಈ ಬಗ್ಗೆ ಆಂತರಿಕ ಸಮೀಕ್ಷೆ ನಡೆಸಿದ ಸಿದ್ಧರಾಮಯ್ಯ ಅವರು ಜನರ ನಾಡಿಮಿಡಿತ ಅರಿತು ಸ್ಪರ್ಧೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ವರುಣಾದಿಂದ ಸ್ಪರ್ಧಿಸಿದರೆ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕೆ ಮಸುಕಾಗಬಹುದು ಎಂಬ ಕಾರಣಕ್ಕೆ ಕೋಲಾರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಶೇಕಡ 76 ರಷ್ಟು ಅಹಿಂದ ವರ್ಗದವರು ಕೈ ಹಿಡಿಯುವ ನಂಬಿಕೆ ಇದೆ. 50,000ಕ್ಕೂ ಹೆಚ್ಚು ಮುಸ್ಲಿಂ ಮತದಾರರು ತಮ್ಮ ಬೆನ್ನಿಗೆ ನಿಲ್ಲುತ್ತಾರೆ. 60,000 ದಲಿತರು ಮತ್ತು 34,000 ಕುರುಬರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು ಎನ್ನುವ ಲೆಕ್ಕಾಚಾರ ಕೂಡ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.