ಬೆಂಗಳೂರು: ಕೇರಳ ಚಿತ್ರರಂಗದಲ್ಲಿ ಜಸ್ಟಿಸ್ ಹೇಮಾ ಸಮಿತಿ ರಚನೆ ಮಾಡಿರುವಂತೆ ಕನ್ನಡ ಚಿತ್ರರಂಗದಲ್ಲಿಯೂ ಒಂದು ಸಮಿತಿ ರಚನೆ ಮಾಡುವಂತೆ ಆಗ್ರಹಿಸಿ ‘ಫೈರ್’ ಸಂಸ್ಥೆ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಶೃತಿ ಹರಿಹರನ್, ಮಲಯಾಳಂ ಚಿತ್ರರಂಗದಲ್ಲಿ ಹೇಮ ಕಮಿಟಿ ರಚನೆಯಾಗಿದೆ. ಅದೇ ರೀತಿ ಕನ್ನಡ ಚಿತ್ರರಂಗಕ್ಕೂ ಒಂದು ಕಮಿಟಿ ಅಗತ್ಯವಿದೆ. ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.
ಇಲ್ಲಿ ನ್ಯಾಯ, ಅನ್ಯಾಯದ ಪ್ರಶ್ನೆ ಬರುವುದಿಲ್ಲ. ಫೈರ್ ನಿಯೋಗದ ಮೂಲಕ ಮಹಿಳೆಯರಾಗಲಿ, ಪುರುಷರೇ ಆಗಿರಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇಂಡಸ್ಟ್ರಿಯಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳ ಕಡಿವಾಣಕ್ಕೆ ಸರ್ಕಾರದ ಬೆಂಬಲ ಬೇಕು. ಆ ನಿಟ್ಟಿನಲ್ಲಿ ಒಂದು ಸಮಿತಿ ರಚನೆಯಾದರೆ ಹೆಣ್ಣುಮಕ್ಕಳು ಇನ್ನು ಹೆಚ್ಚು ಹೆಚ್ಚು ಚಿತ್ರರಂಗದತ್ತ ಧೈರ್ಯವಾಗಿ ಬರಬಹುದು. ಸುರಕ್ಷಿತವಾಗಿ ಉತ್ತಮ ವಾತಾವರಣದಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗುವಂತಾಗಬೇಕು ಎಂದು ಹೇಳಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕೆಲ ಸೌಲಭ್ಯದ ಅಗತ್ಯವಿದೆ. ವಾಶ್ ರೂಮ್, ವಾಹನದ ವ್ಯವಸ್ಥೆಗಳು ಬೇಕು. ಇದು ಕೇವಲ ನಾಯಕಿಯರಿಗೆ ಮಾತ್ರವಲ್ಲ, ಜೂನಿಯರ್ ಆರ್ಟಿಸ್ಟ್, ಡಾನ್ಸರ್, ಹೀಗೆ ಕೆಲಸ ಮಾಡುವ ಪ್ರತಿ ಮಹಿಳೆಯರಿಗೂ ಅಗತ್ಯವಿದೆ. ಎಲ್ಲರನ್ನೂ ಸಮಾನವಾಗ ಕಾಣಬೇಕು. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆಯಾಗಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.