ಮೈಸೂರು: ಮ್ಯಾಟ್ ಖರಿದಿಸುವ ವ್ಯಾಪಾರದಲ್ಲಿ ಚೌಕಾಸಿ ಮಾಡಿದ್ದಕ್ಕೆ ಅಂಗಡಿ ಮಾಲೀಕ ಗ್ರಾಹಕನಿಗೆ ಕತ್ತರಿಯಿಂದ ಚುಚ್ಚಿರುವ ಘಟನೆ ಮೈಸೂರಿನ ಹುಣಸೂರು ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮುರುಗೇಶ್ ಜೋಗಿ ಮಾರ್ಕೆಟಿಂಗ್ ನ ಮಾಲೀಕ ಮುರುಗೇಶ್ ಎಂಬಾತ ಗ್ರಾಹಕ ನಂದೀಶ್ ಎಂಬುವವರಿಗೆ ಕತ್ತರಿಯಿಂದ ಚುಚ್ಚಿದ್ದಾನೆ. ಹಲ್ಲೆಗೊಳಗಾದ ನಂದೀಶ್ ಹುಣಸೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಂದೀಶ್ ತನ್ನ ದೊಡ್ಡಮ್ಮನ ಮಗನ ಜೊತೆ ಗೂಡ್ಸ್ ವಾಹನದಲ್ಲಿ ಕುಶಾಲನಗರದಿಂದ ಹುಣಸೂರಿನ ವೀರನಹೊಸಳ್ಳಿಗೆ ಬಂದಿದ್ದರು. ಮ್ಯಾಟ್ ಖರೀದಿಸಲು ಮುರಿಗೇಶ್ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಮ್ಯಾಟ್ ಗೆ 2300 ರೂಪಾಯಿ ಎಂದು ಮುರುಗೇಶ್ ಹೇಳಿದ್ದಾರೆ. ನಂದೀಶ್ ಬಾರ್ಗೇನ್ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಮುರುಗೇಶ್ ಒಪ್ಪಿಲ್ಲ. ಆದಾಗ್ಯೂ ಮ್ಯಾಟ್ ಖರೀದಿಸಿ 2000 ರೂಪಾಯಿ ಕೊಟ್ಟು ಗೂಡ್ಸ್ ಹತ್ತುತ್ತಿದ್ದಂತೆ ಕೋಪಗೊಂಡ ಮುರುಗೇಶ್ ಕೈಯಲ್ಲಿದ್ದ ಕತ್ತರಿಯನ್ನು ತೆಗೆದು ನಂದೀಶ್ ಮೇಲೆ ಎಸೆದಿದ್ದು, ಕತ್ತರಿ ಚುಚ್ಚಿಕೊಂಡಿದೆ. ಅಲ್ಲದೇ ಗೂಡ್ಸ್ ವಾಹನವನ್ನು ಬೈಕ್ ನಲ್ಲಿ ಹಿಂಬಾಲಿಸಿ ನಂದೀಶ್ ಹಾಗೂ ರಮೇಶ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.