
ಯಾದಗಿರಿ : ಯಾದಗಿರಿ ಜಿಲ್ಲೆಯ ಗುಮಠಕಲ್ ತಾಲೂಕಿನ ಸೈದಾಪುರ ಸಮೀಪದ ಬಾಲಛೇಡದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮಾದರಿ ವಸತಿ ಶಾಲೆಯ ೩೫೦ ಕ್ಕೂ ಹೆಚ್ಚು ಮಕ್ಕಳು ವಿಚಿತ್ರ ಚರ್ಮರೋಗ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕಲುಷಿತ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕೊರತೆಯಿಂದ ಚರ್ಮ ರೋಗಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ವಿದ್ಯಾರ್ಥಿಗಳ ದೇಹದಾದ್ಯಂತ ತುರಿಕೆ, ಗುಳ್ಳೆಗಳು, ಸುಕ್ಕುಗಟ್ಟಿದಂಥ ಸಮಸ್ಯೆಗೆ ನರಳುತ್ತಿದ್ದಾರೆ.
ನಿತ್ಯ ಇದೇ ಕಾರಣಕ್ಕೆ 15 ರಿಂದ 20 ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ವೇಳೆ ವಿದ್ಯಾರ್ಥಿಗಳಲ್ಲಿ ಕಾಡುತ್ತಿರುವ ಚರ್ಮದ ಸಮಸ್ಯೆ ಬೆಳಕಿಗೆ ಬಂದಿದೆ.