ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ರಾತ್ರಿ ಹಾವು ಕಚ್ಚಿದ್ದು, ಆದರೆ ಕಚ್ಚಿದ್ದು ಹಾವು ಹೌದೋ ಅಲ್ಲವೋ ಎಂಬ ಗೊಂದಲದಲ್ಲಿ ಪೋಷಕರು ಆಕೆಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸದ ಕಾರಣ ದುರಂತ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿಕಾರಿಪುರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾಗಿದ್ದ 17 ವರ್ಷದ ಅಕ್ಷತಾ ಮೃತಪಟ್ಟ ದುರ್ದೈವಿಯಾಗಿದ್ದು, ಇನ್ನು ಕೆಲ ದಿನಗಳಲ್ಲಿ ಕಾಲೇಜಿಗೆ ಹೋಗಬೇಕಿದ್ದ ಆಕೆ ಇದೀಗ ಬಾರದ ಲೋಕಕ್ಕೆ ತೆರಳಿದ್ದಾಳೆ. ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ದುಃಖ ಮುಗಿಲು ಮುಟ್ಟಿದೆ.
ಸೊರಬ ತಾಲೂಕು ಆನವಟ್ಟಿಯ ತಲ್ಲೂರಿನಲ್ಲಿ ಅಕ್ಷತಾ, ಕುಟುಂಬ ಸದಸ್ಯರೊಂದಿಗೆ ಮಲಗಿದ್ದಾಗ ರಾತ್ರಿ ಹಾವು ಕಚ್ಚಿದ್ದು ಆಕೆ ಕಿರುಚಿಕೊಂಡು ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಳು. ಮನೆಯವರು ಎದ್ದು ಹುಡುಕಾಡಿದಾಗ ಹಾವು ಕಾಣಿಸಿಲ್ಲ. ಹೀಗಾಗಿ ಯಾವುದೋ ಹುಳು ಕಚ್ಚಿರಬೇಕು ಎಂದು ಭಾವಿಸಿ ಎಲ್ಲರೂ ಮಲಗಿದ್ದಾರೆ.
ಆದರೆ ಬೆಳಿಗ್ಗೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಆನವಟ್ಟಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಹಾವಿನ ವಿಷ ದೇಹ ವ್ಯಾಪಿಸಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.