ಇಸ್ರೇಲ್ ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹತರಾಗಿದ್ದಾರೆಂದು ನಂಬಲಾಗಿದ್ದ ಜರ್ಮನ್ ಟ್ಯಾಟೂ ಕಲಾವಿದೆ ಶಾನಿ ಲೌಕ್ ಬದುಕಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ. ಹಮಾಸ್ ಭಯೋತ್ಪಾದಕರು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಜನರ ಮೇಲೆ ದಾಳಿ ಮಾಡಿದ ದಿನದಂದು ಹೊರಬಿದ್ದ ಆಘಾತಕಾರಿ ವೀಡಿಯೊದಲ್ಲಿ ಶಾನಿ ಲೌಕ್ ಅವರ ಅರೆ ಬೆತ್ತಲೆ ದೇಹವನ್ನು ವಾಹನದ ಹಿಂಭಾಗದಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡಿದ್ದರು.
ಭಯೋತ್ಪಾದಕರು ಕ್ರೌರ್ಯ ಮೆರೆದ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಹಮಾಸ್ ಭಯೋತ್ಪಾದಕರು ಶಾನಿ ಲೌಕ್ ರನ್ನು ಕೊಂದಿದ್ದು ಆಕೆ ಸತ್ತಿದ್ದಾಳೆಂದು ಭಾವಿಸಲಾಗಿತ್ತು. ಆದರೆ ಇದೀಗ ಆಕೆಯ ತಾಯಿ ರಿಕಾರ್ಡಾ ಲೌಕ್, ಶಾನಿ ಲೌಕ್ ಜೀವಂತವಾಗಿದ್ದಾಳೆ. ಆದರೆ ತಲೆಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಮರಳಿ ತರಲು ಜರ್ಮನ್ ಸರ್ಕಾರವು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಶಾನಿ ಲೌಕ್ ಸ್ಥಿತಿ ಗಂಭೀರವಾಗಿದ್ದು ನಮ್ಮ ಬಳಿ ಈಗ ಪುರಾವೆಗಳಿವೆ. ಪ್ರತಿ ನಿಮಿಷವೂ ನಿರ್ಣಾಯಕ. ಆಕೆಯನ್ನ ಕರೆತರಲು ನೀವು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಶಾನಿಯನ್ನು ಗಾಜಾ ಪಟ್ಟಿಯಿಂದ ಹೊರತರಬೇಕು ಎಂದು ವಿಡಿಯೋ ಮಾಡಿ ಆಕೆಯ ತಾಯಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
“ಇಂದು ಬೆಳಿಗ್ಗೆ ನನ್ನ ಮಗಳು, ಜರ್ಮನಿಯ ಪ್ರಜೆ ಶಾನಿ ನಿಕೋಲ್ ಲೌಕ್, ದಕ್ಷಿಣ ಇಸ್ರೇಲ್‌ನಲ್ಲಿ ಪ್ರವಾಸಿಗರ ಗುಂಪಿನೊಂದಿಗೆ ಪ್ಯಾಲೇಸ್ಟಿನಿಯನ್ ಹಮಾಸ್‌ನಿಂದ ಅಪಹರಿಸಲಾಗಿದೆ. ನಮಗೆ ವೀಡಿಯೊವನ್ನು ಕಳುಹಿಸಲಾಗಿದೆ. ಅದರಲ್ಲಿ ನಮ್ಮ ಮಗಳು ಪ್ಯಾಲೆಸ್ಟೀನಿಯನ್ನರೊಂದಿಗೆ ಕಾರಿನಲ್ಲಿ ಪ್ರಜ್ಞಾಹೀನರಾಗಿರುವುದನ್ನು ನಾನು ಸ್ಪಷ್ಟವಾಗಿ ನೋಡಿದೆ. ಭಯೋತ್ಪಾದಕರು ಗಾಜಾ ಪಟ್ಟಿಯ ಸುತ್ತಲೂ ಆ ವಾಹನದಲ್ಲಿ ಸುತ್ತಾಡುತ್ತಿದ್ದಾರೆ. ನಮಗೆ ಸಹಾಯ ಮಾಡಿ” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಆರಂಭದಲ್ಲಿ ದುರಂತ ಘಟನೆಯಲ್ಲಿ ಕಾಣಿಸಿಕೊಂಡ ಮಹಿಳೆ ಹಮಾಸ್ ಭಯೋತ್ಪಾದಕರ ವಶದಲ್ಲಿರುವ ಇಸ್ರೇಲಿ ಮಹಿಳೆ ಎಂದು ಭಾವಿಸಲಾಗಿತ್ತು. ಆದಾಗ್ಯೂ ಗಾಜಾ ಗಡಿ ಬೇಲಿ ಬಳಿ ನಡೆದ ಶಾಂತಿಗಾಗಿ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ಭೇಟಿ ನೀಡಿದ್ದ ಜರ್ಮನ್ ಪ್ರಜೆ, ಟ್ಯಾಟೂ ಕಲಾವಿದೆ 30 ವರ್ಷದ ಶಾನಿ ಲೌಕ್ ಎಂಬುದು ಸ್ಪಷ್ಟವಾಯಿತು. ಸಂಗೀತೋತ್ಸವದಲ್ಲಿ ಭಾಗವಹಿಸಿದ್ದ ಒಟ್ಟು 260 ಜನರನ್ನು ಹಮಾಸ್ ಭಯೋತ್ಪಾದಕರು ಕೊಂದಿದ್ದರು.