ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಇಂದು ಎರಡನೇ ವಾರಕ್ಕೆ ಕಾಲಿಟ್ಟಿದೆ. ಹೀಗಿದ್ದರೂ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳಾಗುತ್ತಿದ್ದರೂ, ವಿಧಾನ ಮಂಡಲ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದರೂ ಪ್ರತಿಪಕ್ಷಕ್ಕೆ ಅಧಿಕೃತ ನಾಯಕರು ಇಲ್ಲದಂತಾಗಿದೆ. ವಿಪಕ್ಷ ನಾಯಕನ ಆಯ್ಕೆ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿ ಹಿರಿಯ ಮುಖಂಡರು ಹಾಗೂ ಶಾಸಕರಿಂದ ಅಭಿಪ್ರಾಯ ಪಡೆದುಕೊಂಡಿದ್ದು, ವರಿಷ್ಠರಿಗೆ ವರದಿಯನ್ನು ನೀಡಲಾಗಿದೆ.
ಆದರೆ, ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿಲ್ಲ. ರಾಜ್ಯ ಬಿಜೆಪಿ ನಾಯಕರಲ್ಲಿ ವಿಪಕ್ಷ ನಾಯಕರಾಗಲು ಹಲವರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವರಿಷ್ಠರು ಅಳೆದು ತೂಗಿ ಈ ವೇಳೆಗಾಗಲೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಅಧಿವೇಶನ ಎರಡನೇ ವಾರಕ್ಕೆ ಕಾಲಿಟ್ಟರೂ ಇನ್ನೂ ವಿಪಕ್ಷ ನಾಯಕರು ಇಲ್ಲದಂತಾಗಿದೆ. ಇದು ವಿಪಕ್ಷ ಸದಸ್ಯರಿಗೆ ಮುಜುಗರ ತಂದಿಟ್ಟಿದೆ.