ಭಾರತ ದೇಶದ ಪ್ರಜೆಯಾಗಿ ಹೆಮ್ಮೆಪಡಲು ಸರ್ಕಾರ ನಮಗೊಂದು ಸುವರ್ಣಾವಕಾಶ ಕಲ್ಪಿಸಿದ್ದು, ಸೆ.15 ರಂದು ಭಾರತ ಸಂವಿಧಾನದ ಪೀಠಿಕೆ ಓದಲು ಹೆಚ್ಚು ಹೆಚ್ಚು ಜನರು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಆನ್ಲೈನ್ ಮೂಲಕ ನೊಂದಣ ಮಾಡಿಕೊಳ್ಳುವಂತೆ ಕ್ರಮ ವಹಿಸಿಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮನವಿ ಮಾಡಿದ್ದಾರೆ.
ಇದೇ ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ನಿಟ್ಟಿನಲ್ಲಿ, ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ಕೆ ನೊಂದಣಿ ಮಾಡಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತವು ಜಾತ್ಯತೀಯ ರಾಷ್ಟ್ರವಾಗಿದೆ. ಭಾರತ ದೇಶದ ಬಗ್ಗೆ ನಮಗಿರುವ ಹೆಮ್ಮೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಅಂಶವನ್ನು ಎಲ್ಲರೂ ಶಾಲೆಗಳಲ್ಲಿ ಓದಿರುತ್ತಾರೆ, ಬಳಿಕ ಅದನ್ನು ಮರೆತುಬಿಡುತ್ತಾರೆ. ಭಾರತ ಸಂವಿಧಾನದ ಪೀಠಿಕೆಯನ್ನು ಸೆ.15 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಯೊಬ್ಬರೂ ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಇದಕ್ಕಾಗಿ ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಳ್ಳಬೇಕು, ಅಲ್ಲದೆ ಸೆ.15 ರಂದು ಬೆ.10 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದಿ, ಅದನ್ನು ಪ್ರತಿಜ್ಞಾ ವಿಧಿಯಂತೆ ಸ್ವೀಕರಿಸಬೇಕು. ಅದರ ಫೋಟೋವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿಕೊಂಡಲ್ಲಿ, ಅಂತಹ ಎಲ್ಲರಿಗೂ ಸೆ.15 ರ ಬಳಿಕ ಆನ್ಲೈನ್ನ ಅದೇ ವೆಬ್ಸೈಟ್ ಮೂಲಕವೇ ಪ್ರಮಾಣಪತ್ರ ದೊರೆಯಲಿದೆ. ಕಾರ್ಯಕ್ರಮದ ಯಶಸ್ವಿಗೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು ವಿಶೇಷ ಆಸಕ್ತಿ ಹೊಂದಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಿ
ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು, ಸಾರ್ವಜನಿಕರು, ಹಾಸ್ಟೆಲ್ಗಳು, ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳು, ಸಾರ್ವಜನಿಕ ವಲಯದ ಉದ್ಯಮಗಳು, ಏಜೆನ್ಸಿಗಳು, ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಪೆÇಲೀಸ್ ಇಲಾಖೆ, ನ್ಯಾಯಾಲಯಗಳು, ಶಾಸಕಾಂಗಗಳ ನೊಂದಣಿ ಮಾಡಿಸಬೇಕು. ಸ್ವಸಹಾಯ ಗುಂಪುಗಳು, ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳು, ನಗರ, ಸ್ಥಳೀಯ ಸಂಸ್ಥೆಗಳು, ಪ್ರತಿಯೊಂದು ಇಲಾಖೆಗಳು ಆಯಾ ವ್ಯಾಪ್ತಿಯ ಫಲಾನುಭವಿಗಳ ನೊಂದಣಿ ಮಾಡಿಸಬೇಕು, ಶಿಕ್ಷಣ ಇಲಾಖೆಯವರು ಶಾಲಾ ಕಾಲೇಜುಗಳ ಸಭೆ ನಡೆಸಿ, ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನೋಂದಣಿ ಹೇಗೆ..?
ಸಂವಿಧಾನದ ಪೀಠಿಕೆ ಓದಲು ಆನ್ಲೈನ್ ನೊಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದೆ. ನೊಂದಣಿ ಅವಧಿ ಸೆ.12 ರಂದು ಸಂಜೆ 06 ಕ್ಕೆ ಮುಕ್ತಾಯವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ರೂಪಿಸಿರುವ ವೆಬ್ಸೈಟ್ https://thepreamble-swdkar.in ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಮುಂತಾದ ವಿವರ ನೀಡಿ ನೊಂದಣಿ ಮಾಡಿಕೊಳ್ಳಬೇಕು.
ಸೆ.15 ರಂದು ಓದಬೇಕಾದ ಸಂವಿಧಾನದ ಪೀಠಿಕೆ
ಸಂವಿಧಾನದ ಪೀಠಿಕೆಯಲ್ಲಿರುವ ಪ್ರತಿಯೊಂದು ಪದಗಳು, ವಾಕ್ಯ ಬಹಳಷ್ಟು ಮುಖ್ಯವಾಗಿದ್ದು, ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ, ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಹೀಗಾಗಿ ಸೆ.15 ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲರೂ ಸಂವಿಧಾನದ ಪೀಠಿಕೆಯಾದ, “ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದೀ, ಸರ್ವಧರ್ಮ, ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ: ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ, ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿದವರಾಗಿ: ನಮ್ಮ ಸಂವಿಧಾನ ಸಭೆಯಲ್ಲಿ 1949 ನೇ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೇ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ” ಎಂಬುದಾಗಿ ಓದಿ ಪ್ರತಿಯೊಬ್ಬರೂ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು.
*ಸಂವಿಧಾನ ಪೀಠಿಕೆ ಓದುವ ಉದ್ದೇಶ:
ಸಂವಿಧಾನವು ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಜ್ಞಾನ ದೀವಿಗೆ, ಸಮಾನತೆಯ ದೀವಿಗೆಯಾಗಿದೆ. ಹೀಗಾಗಿ ಸಂವಿಧಾನದ ಪೀಠಿಕೆ ಓದುವುದು ಮಹತ್ವವಾದ ಉದ್ದೇಶ ಹೊಂದಿದ್ದು, ಇದು ವಿದ್ಯಾರ್ಥಿಗಳು ತಮ್ಮ ರಾಷ್ಟ್ರ ನಿರ್ಮಿಸಿರುವ ಮೂಲಭೂತ ತತ್ವಗಳು, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನೊಂದಣಿ ಪ್ರಕ್ರಿಯೆ ಸಂಬಂಧಿಸಿದಂತೆ ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚಿಸಿದರು.