ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2024- 25 ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಿಂದ ಪುನಾರಂಭಗೊಳ್ಳಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ, 48 ದಿನ ಬೇಸಿಗೆ ರಜೆ, 244 ದಿನ ಶಾಲಾ ಕರ್ತವ್ಯದ ದಿನಗಳು ಎಂದು ನಿಗದಿ ಪಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರಿಗೆ 121 ದಿನಗಳ ಒಟ್ಟಾರೆ ರಜೆ ಸಿಗಲಿದೆ.
ಶಾಲಾ ಅವಧಿಯ 244 ದಿನಗಳಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗೆ 180 ದಿನ, ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕೆ 26 ದಿನ, ಪಠ್ಯೇತರ ಚಟುವಟಿಕೆಗೆ 24 ದಿನ, ಫಲಿತಾಂಶ ವೀಕ್ಷಣೆಗಾಗಿ 10 ದಿನ ಮೀಸಲಿಡಲಾಗಿದ್ದು, ಉಳಿದ 4 ದಿನಗಳನ್ನು ಸ್ಥಳೀಯ ರಜೆಗಳಾಗಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಮೇ 29 ರಿಂದ ಅಕ್ಟೋಬರ್ 2ರವರೆಗೆ 2024 -25 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲ ಅವಧಿಯಾಗಿರುತ್ತದೆ. ಅಕ್ಟೋಬರ್ 21ರಿಂದ ಏಪ್ರಿಲ್ 10ರವರೆಗೆ ಎರಡನೇ ಅವಧಿ ನಿಗದಿಪಡಿಸಲಾಗಿದೆ.