ಬೆಳಗಾವಿ(ಸುವರ್ಣ ಸೌಧ): ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಮತ್ತು ಹಣ ಪಾವತಿಗಾಗಿ ಸ್ಟೇಟ್ಸ್ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಭಾನಾಯಕ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬೇರೆ ಬೇರೆ ರೀತಿಯಲ್ಲಿ ಅವುಗಳಿಗೆ ಅರ್ಜಿ ಸಲ್ಲಿಸುವ, ವಿದ್ಯಾರ್ಥಿ ವೇತನ ಪಡೆಯುವ ವ್ಯವಸ್ಥೆ ಇದೆ. ಅದನ್ನು ಏಕರೂಪಗೊಳಿಸಲು ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪೋರ್ಟಲ್ ಮೂಲಕವೇ ವಿದ್ಯಾರ್ಥಿಗಳ ಅಥವಾ ಪೋಷಕರ ಬ್ಯಾಂಕ್ ಖಾತೆಗೆ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.