ಬೆಂಗಳೂರು: ಒಂದು ಕೋಟಿ ರೂಪಾಯಿವರೆಗಿನ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ ಒಂದು ಕೋಟಿ ರೂಪಾಯಿವರೆಗಿನ ಎಲ್ಲಾ ಕಾಮಗಾರಿಗಳಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ನೀಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016ರಲ್ಲಿ 50 ಲಕ್ಷ ರೂಪಾಯಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿತ್ತು. ಇದನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ ಒಂದು ಕೋಟಿ ರೂಪಾಯಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿಗೆ ಶೇಕಡ 17.15 ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇಕಡಾ 6.95 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.