ಮೈಸೂರು: ಸಂತ ಪರಂಪರೆ ಮುಂದುವರೆಸಲು ಮಠಕ್ಕೆ ಸನ್ಯಾಸಿಗಳೇ ಸಿಗುವುದು ಕಷ್ಟವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಮೈಸೂರಿನಲ್ಲಿ ಕೊಡಗು ಗೌಡ ಸಮಾಜದ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಆಸಕ್ತಿ ಇದ್ದವರು ದೀಕ್ಷೆ ಸ್ವೀಕರಿಸಲು ಮಠಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಸಮಾಜ ಮತ್ತು ಸಮುದಾಯದ ಒಳಿತಿಗೆ ಸನ್ಯಾಸ ದೀಕ್ಷೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಆಧ್ಯಾತ್ಮಿಕ ಆಸಕ್ತಿ ಇರುವವರು ಸನ್ಯಾಸ ಸ್ವೀಕರಿಸಲು ಮುಂದಾದರೆ ಕುಟುಂಬದವರು, ಬಂಧು ಬಳಗದವರು ತಡೆಯುತ್ತಾರೆ. ನಾನು ಕೂಡ ಸನ್ಯಾಸ ದೀಕ್ಷೆ ಪಡೆಯಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು ಎಂದು ಹೇಳಿದ್ದಾರೆ.
ಯಾರಾದರೂ ಸಮಾಜದೊಂದಿಗೆ ಸಮುದಾಯ ಸೇವೆ ಮಾಡಬೇಕೆಂಬ ಆಸಕ್ತಿ ಇದ್ದರೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಮಠಕ್ಕೆ ಬನ್ನಿ ಎಂದು ಶ್ರೀಗಳು ಆಹ್ವಾನ ನೀಡಿದ್ದಾರೆ.