‘ಸಾಲಿ ಆದಿ ಘರ್ವಾಲಿ’ ಇದು ನೀವು ಹಲವಾರು ಬಾರಿ ಕೇಳಿರಬೇಕು. ಇದರ ಅರ್ಥ ನಾದಿನಿ (ಪತ್ನಿಯ ತಂಗಿ) ಎಂದರೆ ಅರ್ಧ ಹೆಂಡತಿ ಎಂದು. ಈ ಹಾಸ್ಯವನ್ನು ಮದುವೆಯ ಸಮಯದಲ್ಲಿ ಅನೇಕ ಬಾರಿ ಮುನ್ನೆಲೆಗೆ ತರಲಾಗುತ್ತದೆ. ಈಗ, ಟ್ವಿಟ್ಟರ್ ಬಳಕೆದಾರರಾದ ರಿತುಪರ್ಣ ಚಟರ್ಜಿ ಅವರು ಈ ಪದಗುಚ್ಛದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇದು ಪುರುಷರು ಮಾಡಿರುವ ಪದಗುಚ್ಛ. ಇದನ್ನು ಯಾವ ಮಹಿಳೆಯೂ ಒಪ್ಪಬಾರದು. ಪುರುಷರು ತಮ್ಮ ಏಕಪತ್ನಿತ್ವವನ್ನು ಮೀರಿ ತಮ್ಮ ರೆಕ್ಕೆಗಳನ್ನು ಹರಿಬಿಡಲು ಇಂಥದ್ದೊಂದು ಅಸಂಬದ್ದ ಪದಗುಚ್ಛ ಶುರು ಮಾಡಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ತಕ್ಷಣವೇ ವೈರಲ್ ಆಗಿದೆ. ಇದು ಒಟ್ಟು ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಮಂದಿ ಈ ಟ್ವೀಟ್ ಸರಿಯಾಗಿದೆ. ಈ ಪದಗುಚ್ಛವನ್ನು ನಿರ್ಮೂಲನ ಮಾಡಬೇಕು ಎಂದಿದ್ದಾರೆ. ಇಂಥ ಪದಗುಚ್ಛಗಳು ಹೆಂಡತಿಯೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ, ಇದು ಅಸಹ್ಯಕರವಾದದ್ದು, ಅಶ್ಲೀಲತೆಯ ಪ್ರತೀಕ ಎಂದು ಹಲವರು ಕಿಡಿ ಕಾರಿದ್ದಾರೆ.