ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ 6000 ರೂ. ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ನೀಡಲಾಗುತ್ತಿದೆ.
ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಫೆ. 12 ರಿಂದ 21 ರವರೆಗೆ 10 ದಿನಗಳ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅರ್ಹ ರೈತರ ನೋಂದಣಿಯೊಂದಿಗೆ ಈಗಾಗಲೇ ನೋಂದಣಿಯಾಗಿರುವ ರೈತರ ಬಾಕಿಯಿರುವ ಇ-ಕೆವೈಸಿ ಮಾಡಿಸಲು ಮತ್ತು ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವ ಮೂಲಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ರೈತರು ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಪಿಎಂಕಿಸಾನ್ ಇ-ಕೆವೈಸಿ ಫೇಸ್ ರೆಗ್ನನೇಷನ್ ಆಪ್ ಮೂಲಕ ಇ-ಕೆವೈಸಿ ಮಾಡಿಸುವಂತೆ ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.