ಬೆಳಗಾವಿ: ಯಾವುದೇ ಸಕ್ಕರೆ ಕಾರ್ಖಾನೆ ತೂಕದಲ್ಲಿ ವಂಚನೆ ಮಾಡಿದಲ್ಲಿ ರೈತರು ದೂರು ದಾಖಲಿಸಿದರೆ 24ಗಂಟೆಯೊಳಗೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ರೈತರ ಪರವಾಗಿ ನಿಲ್ಲಲಿದ್ದು, ವಂಚನೆ ದೂರು ದಾಖಲು ಮಾಡುವ ರೈತರಿಗೆ ಒಂದು ಲಕ್ಷ ಬಹುಮಾನ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಭಟನಾನಿರತ ರೈತರನ್ನು ಭೇಟಿಯಾದ ಸಚಿವರು, ರೈತರ ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ವಂಚನೆಯ ಬಗ್ಗೆ ರೈತರು ದೂರು ದಾಖಲಿಸಲು ಭಯಪಡುವ ಅಗತ್ಯವಿಲ್ಲ. ದೂರು ದಾಖಲಿಸಿದಲ್ಲಿ ಸರ್ಕಾರ ರೈತರ ಪರವಾಗಿ ನಿಲ್ಲಲಿದೆ. ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಅವರ ಕಬ್ಬನ್ನು ನುರಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ತೂಕದಲ್ಲಿ ವಂಚನೆ ತಡೆಗೆ ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಿಜಿಟಲ್ ತೂಕದ ಯಂತ್ರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರ ಕಬ್ಬಿನ ಬಿಲ್ ಬಾಕಿಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ 13 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಹಿಂದಿನ ಸರ್ಕಾರ ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದೆ. ನಮ್ಮ ಸರ್ಕಾರ ನಷ್ಟದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸಹಕಾರಿ ವಲಯದಲ್ಲಿ ಉಳಿಸಿಕೊಂಡು ಪುನಶ್ಚೇತನಗೊಳಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.