
ರಾಮನಗರ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೈ ಕತ್ತರಿಸಿದ ರೌಡಿಶೀಟರ್ ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ರೌಡಿಶೀಟರ್ ಹರ್ಷ ಮತ್ತು ಕರುಣೇಶ ಅವರನ್ನು ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ, ಗ್ರಾಮಾಂತರ ಸಿಪಿಐ ಕೃಷ್ಣ ಲಮಾಣಿ, ಪಿಎಸ್ಐಗಳಾದ ಮನೋಹರ್, ರವಿಕುಮಾರ್ ನೇತೃತ್ವದ ತಂಡ ಫೈರಿಂಗ್ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ದುಷ್ಕರ್ಮಿಗಳ ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲಿಗೆ ಗುಂಡೇಟು ತಗಲಿದ ಆರೋಪಿಗಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.