ಮನೆಯೊಂದರಲ್ಲಿ ತಮ್ಮ ಹಿಂದೂ ಸ್ನೇಹಿತೆಯ ಹುಟ್ಟುಹಬ್ಬ ಆಚರಿಸುತ್ತಿದ್ದ ಐವರು ಮುಸ್ಲಿಂ ಯುವಕರನ್ನು ಥಳಿಸಿರುವ ಬಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ಮಾಡಲಾಗುತ್ತಿತ್ತು ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಐವರು ಯುವಕರನ್ನು ಜೈಲಿಗೆ ಕಳುಹಿಸಲಾಗಿದೆ.
ಜನವರಿ 21ರ ಶನಿವಾರದಂದು ಮಧ್ಯಪ್ರದೇಶದ ಇಂದೋರ್ ನ ಎಂಐಜಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮನೆಯೊಂದರಲ್ಲಿ 24 ವರ್ಷದ ಹಿಂದೂ ಯುವತಿಯ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿತ್ತು. ಆಕೆಯ ಸ್ನೇಹಿತೆ ಸೇರಿದಂತೆ ಐವರು ಮುಸ್ಲಿಂ ಯುವಕರು ಸಹ ಇದರಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಏಕಾಏಕಿ ನುಗ್ಗಿದ ಬಜರಂಗದಳ ಕಾರ್ಯಕರ್ತರ ದೊಡ್ಡ ಗುಂಪು ಅಕ್ರಮವಾಗಿ ಮನೆ ಪ್ರವೇಶಿಸಿದೆ. ಅಲ್ಲದೆ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ಆರೋಪಿಸಿ ಯುವಕರನ್ನು ಥಳಿಸಲಾಗಿದೆ. ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದ್ದು, ಐವರು ಯುವಕರನ್ನು ಜೈಲಿಗೆ ಕಳುಹಿಸಲಾಗಿದೆ.
ಪೊಲೀಸರ ಈ ಕ್ರಮ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಅಕ್ರಮವಾಗಿ ಮನೆಗೆ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತರನ್ನು ಬಂಧಿಸುವುದನ್ನು ಬಿಟ್ಟು ಮುಸ್ಲಿಂ ಯುವಕರನ್ನು ಜೈಲಿಗೆ ಕಳುಹಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ.