ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕಟ್ಟಿಕೊಂಡ ಮನೆಗಳಿಗೆ ಹಕ್ಕು ಪತ್ರ ವಿತರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವ ಪ್ರಸ್ತಾಪ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಯಶ್ ಪಾಲ್ ಸುವರ್ಣ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿ, 94ಸಿ ಮತ್ತು 94ಸಿಸಿ ಅಡಿಯಲ್ಲಿ ಅನರ್ಹರು ಹೆಚ್ಚು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದಲ್ಲಿ ಅದೇ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
94ಸಿ ಅಡಿಯಲ್ಲಿ 6.26 ಲಕ್ಷ ಅರ್ಜಿ ಸಲ್ಲಿಕೆಯಾಗಿ, 1.63 ಲಕ್ಷ ಅರ್ಜಿಗಳನ್ನು ಮಾನ್ಯ ಮಾಡಿ ಮಂಜೂರಾತಿ ನೀಡಲಾಗಿದೆ. 4.12 ಲಕ್ಷ ಅರ್ಜಿ ತಿರಸ್ಕೃತಗೊಂಡಿದೆ. 94ಸಿಸಿ ಅಡಿಯಲ್ಲಿ 2.12 ಲಕ್ಷ ಅರ್ಜಿ ಸಲ್ಲಿಕೆಯಾಗಿ 69,236 ಅರ್ಜಿದಾರರಿಗೆ ಮಂಜೂರಾತಿ ನೀಡಲಾಗಿದ್ದು, 1.28 ಲಕ್ಷ ಅರ್ಜಿ ತಿರಸ್ಕೃತಗೊಂಡಿವೆ. ಅನರ್ಹರು ಬಡವರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಕಡೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡದಿದ್ದರೂ ಸ್ವಂತ ಮನೆ ಹೊಂದಿದ ಶ್ರೀಮಂತರಿಗೆ ಹಕ್ಕುಪತ್ರ ವಿತರಿಸಿದ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.