ಧಾರವಾಡ: ನಿವೃತ್ತ ಉದ್ಯೋಗಿಯೊಬ್ಬರಿಗೆ ಗ್ರಾಚ್ಯುಟಿ ಹಣ ಪಾವತಿಸಲು ವಿಳಂಬ ಮಾಡಿರುವ ಪ್ರಾಧಿಕಾರಗಳಿಗೆ ತರಾಟೆಗೆ ತೆಗೆದುಕೊಂಡಿರುವ ಧಾರವಾಡ ಹೈಕೋರ್ಟ್ ಪೀಠ, ಉದ್ಯೋಗಿಯ ಗ್ರಾಚ್ಯುಟಿ ಮೊತ್ತವನ್ನು 30 ದಿನಗಳಲ್ಲಿ ಬಡ್ಡಿ ಸಹಿತ ಪಾವತಿ ಮಾಡುವಂತೆ ಆದೇಶ ನೀಡಿದೆ.
ನಿವೃತ್ತಿಯಾಗಿ 16 ವರ್ಷ ಕಳೆದರೂ ಇಲಾಖೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸದೇ ಅನಗತ್ಯ ವಿಳಂಬ ಮಾಡಿ, ನಿಕೃಷ್ಟವಾಗಿ ನಡೆದುಕೊಂಡಿದೆ. ಕಂಟ್ರೋಲಿಂಗ್ ಅಥಾರಿಟಿ ಹಣ ಪಾವತಿಸುವಂತೆ ಸೂಚಿಸಿ 11 ವರ್ಷ ಕಳೆದಿದೆ. ಆದಾಗ್ಯೂ ಇಲಾಖೆ ಬೇಜವಾಬ್ದಾರಿ ಮೆರೆದಿದ್ದು, ಇದು ಕೇವಲ ವಿಳಂಬ ಧೋರಣೆ ಅಲ್ಲ, ಅಪರಾಧಿ ವಿಳಂಬ ಎಂದು ಹೈಕೋರ್ಟ್ ವಿಭಾಗೀಯ ಪೀಠ ಚಾಟಿ ಬೀಸಿದೆ. ಇಳಿ ವಯಸ್ಸಿನಲ್ಲಿ ವ್ಯಕ್ತಿಯ ಆರ್ಥಿಕ ಅವಶ್ಯಕತೆಗೆ ಸರ್ಕಾರ ಸ್ಪಂದಿಸದಿರುವುದು ಸರಿಯಾದ ಕ್ರಮವಲ್ಲ ಎಂದು ಗುಡುಗಿದೆ.
ನಿವೃತ್ತ ಉದ್ಯೋಗಿಗೆ ಪಾವತಿಸಬೇಕಿರುವ 4,09,550 ರೂಪಾಯಿ ಗ್ರಾಚ್ಯುಟಿ ಹಣವನ್ನು ಶೇ.10ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.
ಬೆಳಗಾವಿ ಜಿಲ್ಲೆಯ ಬಾಬು ಎಂಬುವವರು 1973ರಲ್ಲಿ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಎಫ್ ಡಿಎ ಆಗಿ ನೌಕರಿಗೆ ಸೇರಿದ್ದರು. 34 ವರ್ಷಗಳ ಕಾಲ ಸೇವೆ ಸಲ್ಲಿಸಿ 2007ರ ಮಾರ್ಚ್ 31ರಂದು ನಿವೃತ್ತಿಯಾಗಿದ್ದರು. ಆದರೆ ಗ್ರಾಚ್ಯುಟಿ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಬು ದಿ ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಅಡಿ ಪರಿಹಾರ ಕೋರಿ ಕಂಟ್ರೋಲಿಂಗ್ ಅಥಾರಿಟಿ ಗೆ ದೂರು ಸಲ್ಲಿಸಿದ್ದರು. ಅಥಾರಿಟಿ 4.9 ಲಕ್ಷ ಹಣ ಪಾವತಿಸಲು ಇಲಾಖೆಗೆ ಆದೇಶ ನೀಡಿತ್ತು. ಆದರೂ ಇಲಾಖೆ ವಿಳಂಬ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.