ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 14 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸ್ವತಃ ಪೊಲೀಸರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ನಟ ದರ್ಶನ್ ಹಾಗೂ 13 ನೇ ಆರೋಪಿ ದೀಪಕ್ ನನ್ನು ಬಚಾವ್ ಮಾಡಲು ಬರೋಬ್ಬರಿ 5 ಕೋಟಿ ರೂಪಾಯಿಗೆ ಡೀಲ್ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲದೇ ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಯೊಬ್ಬ ಪಿಎಸ್ಐ ಗೆ ಕರೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಿಎಸ್ಐ ಒಬ್ಬರ ಸೂಚನೆ ಮೇರೆಗೆ ಶವವನ್ನು ಕಾಮಾಕ್ಷಿಪಾಳ್ಯಕ್ಕೆ ಕೊಂಡೊಯ್ದು ಮೋರಿಗೆ ಎಸೆಯಲಾಗಿತ್ತು ಎನ್ನಲಾಗಿದೆ. ಪಿಎಎಸ್ಐಗೆ ಆರೋಪಿ ಕರೆ ಮಾಡಿದಾಗ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಹೆಣ ಹಾಕಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಆ ಬಳಿಕವೇ ದರ್ಶನ್ & ಗ್ಯಾಂಗ್ ಶವವನ್ನು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಗೆ ಕೊಂಡೊಯ್ದು ಎಸೆದಿದೆ ಎಂದು ತಿಳಿದುಬಂದಿದೆ.
ಶವ ಎಸೆದ ಬಳಿಕ ಆರೋಪಿಗಳು ಪೊಲೀಸ್ ಅಧಿಕಾರಿ ಜೊತೆಯೂ ಚರ್ಚಿಸಿದ್ದಾರೆ. ನಟ ದರ್ಶನ್ ಹೆಸರು ಬರದಂತೆ ತಪ್ಪಿಸಲು ಡೀಲ್ ಗೆ ಮುಂದಾಗಿದ್ದರು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಅಲ್ಲದೇ ಪ್ರಕರಣದ 13ನೇ ಆರೋಪಿ ದೀಪಕ್ ರಾಜಕಾರಣಿಯೊಬ್ಬರ ಸಂಬಂಧಿಯಾಗಿದ್ದು, ಆತನನ್ನು ಪ್ರಕರಣದಿಂದ ಹೊರಗಿಡುವ ಪ್ರಯತ್ನ ನಡೆದಿತ್ತೇ? ಎಂಬ ಶಂಕೆ ಕೂಡ ಮೂಡಿದೆ. ಒಟ್ಟಾರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ತನಿಖೆಯಿಂದಷ್ಟೇ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.