ಕೃಷಿಯೇತರ ಸಹಕಾರಿ ಸಂಘಗಳ ಠೇವಣಿ, ಸಾಲದ ಬಡ್ಡಿ ದರಕ್ಕೆ ಕಡಿವಾಣ: ಏ. 1ರಿಂದಲೇ ಹೊಸ ನಿಯಮ ಜಾರಿಗೆ ಸರ್ಕಾರ ಆದೇಶ

ಬೆಂಗಳೂರು: ಕೃಷಿಯೇತರ ವಿವಿಧೋದ್ದೇಶ ಸಹಕಾರ ಸಂಸ್ಥೆಗಳ ಸಾಲದ ಬಡ್ಡಿಗೆ ಸರ್ಕಾರ ಕಡಿವಾಣ ಹಾಕಿದ್ದು, ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ನಿರ್ದೇಶನ ನೀಡಲಾಗಿದೆ.

ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹ ಮಾಡುವ ಠೇವಣಿ ಮತ್ತು ವಿತರಿಸುವ ಸಾಲದ ಬಡ್ಡಿ ದರಕ್ಕೆ ಕಡಿವಾಣ ಹಾಕಲಾಗಿದೆ. ಸಾಲಗಾರರು ಮತ್ತು ಸಾರ್ವಜನಿಕರ ಹಿತಾಸಕ್ತಿ ಸಂರಕ್ಷಣೆಗಾಗಿ ರಾಜ್ಯದ ಎಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಡಿ ಆದೇಶ ಹೊರಡಿಸಲಾಗಿದೆ.

ಎಸ್.ಬಿ.ಐ. ವಿವಿಧ ಠೇವಣಿಗಳ ಮೇಲೆ ವಿವಿಧ ಅವಧಿಗೆ ನಿಗದಿಪಡಿಸುವ ಬಡ್ಡಿ ದರ ಅಥವಾ ಅದರ ಮೇಲೆ ಶೇಕಡ 2ರಷ್ಟು ಬಡ್ಡಿಯನ್ನು ಮಾತ್ರ ನಿಗದಿಪಡಿಸುವುದು. ಹಿರಿಯ ನಾಗರಿಕರ ಠೇವಣಿ ಮೇಲೆ ಶೇಕಡ 0.5 ರಷ್ಟು ಅಧಿಕ ಬಡ್ಡಿ ನಿಗದಿಪಡಿಸಬಹುದು. ಪಿಗ್ಮಿ ಠೇವಣಿ ಸಂಗ್ರಹ ಮೇಲೆ ಶೇಕಡ 3ಕ್ಕಿಂತ ಹೆಚ್ಚು ಕಮಿಷನ್ ಕೊಡುವಂತಿಲ್ಲ.

ಪ್ರಾಥಮಿಕ ಸಹಕಾರ ಸಂಘ ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇಲೆ ರಚಿಸಲಾದ ಕಂಪನಿ, ಫರ್ಮ್ ಯಾವುದೇ ಇತರ ರೀತಿಯಲ್ಲಿ ಠೇವಣಿ ಸಂಗ್ರಹಿಸುವಂತಿಲ್ಲ. ಸಂಘದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬಾರದು, ಸಹಕಾರ ಸಂಸ್ಥೆಗಳು ಸ್ಥಾನಿಕ ಹಣಕಾಸು ಸಂಸ್ಥೆಗಳಾಗಿದ್ದು ಇಂತಹ ಸಹಕಾರ ಸಂಸ್ಥೆಗಳಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮುಖಾಂತರ ಕಮಿಷನ್ ಇನ್ಸೆಂಟಿವ್ ಕೊಡುವ ಮೂಲಕ ಠೇವಣಿ ಸ್ವೀಕರಿಸುವಂತಿಲ್ಲ.

ಹೆಚ್ಚುವರಿ ಸಂಪನ್ಮೂಲವನ್ನು ಕಡ್ಡಾಯವಾಗಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕುಗಳಲ್ಲಿ ಹೂಡಿಕೆ ಮಾಡತಕ್ಕದ್ದು. ವಿತರಿಸುವ ಸಾಲಗಳಿಗೆ ಶೇಕಡ 12ರಷ್ಟು ಬಡ್ಡಿ ಮೀರುವಂತಿಲ್ಲ. ಸುಸ್ತಿ ಪ್ರಕರಣಗಳಲ್ಲಿ ಹೆಚ್ಚುವರಿ ಆಗಿ ಗರಿಷ್ಠ ಶೇಕಡ 2ರಷ್ಟು ಬಡ್ಡಿ ಮೀರುವಂತಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read