ಮಂಗಳೂರು ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘ ಹಾಕಿರುವ ಬೋರ್ಡ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈದ್ ಮಿಲಾದ್ ಗೆ ಕಡ್ಡಾಯವಾಗಿ ರಜೆ ಮಾಡದಿದ್ದರೆ ಹಸಿ ಮೀನು ವ್ಯಾಪಾರಸ್ಥರಿಗೆ ದಂಡ ವಿಧಿಸುವುದರ ಜೊತೆಗೆ ಒಂದು ತಿಂಗಳು ವ್ಯಾಪಾರ ಮಾಡದಂತೆ ಬಹಿಷ್ಕರಿಸಲಾಗುತ್ತದೆ ಎಂಬ ಸುದ್ದಿಯನ್ನು ಹಂಚಿಕೊಂಡ ಕೆಲವರು ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಅಸಲಿ ಸತ್ಯ ಏನೆಂದರೆ ಮಂಗಳೂರು ಬಂದರಿನಲ್ಲಿ ಈ ಹಿಂದಿನಿಂದಲೂ ವರ್ಷದಲ್ಲಿ ಒಂಬತ್ತು ದಿನಗಳ ಕಾಲ ರಜೆ ಇರುತ್ತದೆ. ಈ ಪೈಕಿ ಹಿಂದೂಗಳ ಹಬ್ಬಕ್ಕೆ 4 ದಿನ, ಮುಸ್ಲಿಮರ ಹಬ್ಬಕ್ಕೆ 3 ದಿನ, ಕ್ರಿಶ್ಚಿಯನ್ನರ ಹಬ್ಬಕ್ಕೆ 2 ದಿನ ರಜೆ ಇದ್ದು, ಹಸಿ ಮೀನು ವ್ಯಾಪಾರಸ್ಥರ ಸಂಘದಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ ಎನ್ನಲಾಗಿದೆ. ಆದರೆ ಇತ್ತೀಚೆಗೆ ಚೌತಿಯ ದಿನದಂದು ರಜೆ ಇದ್ದರೂ ಸಹ ಕೆಲವರು ನಿಯಮ ಮೀರಿ ವ್ಯಾಪಾರ ಮಾಡಿದ ಕಾರಣ ಈ ರೀತಿ ಬೋರ್ಡ್ ಹಾಕಲಾಗಿದೆ ಎಂದು ಹೇಳಲಾಗಿದೆ.
ಹೀಗಾಗಿ ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ಸೆಪ್ಟೆಂಬರ್ 28ರಂದು ಮುಂಜಾನೆ 3:45 ರ ನಂತರ ಹಸಿ ಮೀನು ವ್ಯಾಪಾರಿಗಳು ಕಡ್ಡಾಯವಾಗಿ ರಜಾ ಮಾಡಲು ಈ ಫ್ಲೆಕ್ಸ್ ನಲ್ಲಿ ಸೂಚಿಸಲಾಗಿದ್ದು, ಇಲ್ಲದಿದ್ದರೆ ಒಂದು ತಿಂಗಳು ವ್ಯಾಪಾರಕ್ಕೆ ಅವಕಾಶ ನೀಡದರ ಜೊತೆಗೆ ದಂಡ ವಿಧಿಸುವುದಾಗಿ ಇದರಲ್ಲಿ ತಿಳಿಸಲಾಗಿದೆ. ಈ ಬೋರ್ಡ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆದರೆ ಎಲ್ಲಾ ಸಮುದಾಯದವರನ್ನು ಒಳಗೊಂಡ ಹಸಿ ಮೀನು ವ್ಯಾಪಾರಸ್ಥರ ಸಂಘ ಈ ತೀರ್ಮಾನ ಕೈಗೊಂಡಿದೆ. ಈ ಪೋಸ್ಟ್ ನೋಡಿರುವ ಸೋಶಿಯಲ್ ಮೀಡಿಯಾ ಬಳಕೆದಾರರು ಬಹಿಷ್ಕಾರದಂತಹ ಕ್ರಮ ಕೈಗೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉದ್ದೇಶಪೂರ್ವಕವಾಗಿ ಕೆಲವರು ಈ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಪ್ಪಾರ್ಥ ಮೂಡಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.