ಬೆಂಗಳೂರು: ಪಡಿತರ ಪಡೆದವರ ಖಾತೆಗೆ ಮಾತ್ರ 5 ಕೆಜಿ ಅಕ್ಕಿ ಹಣವನ್ನು ಜಮಾ ಮಾಡಲಾಗುತ್ತದೆ. ಆಹಾರ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.
ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ಬದಲಿಗೆ ಹಣ ಪಡೆಯಲು ಫಲಾನುಭವಿಗಳು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಆಹಾರ ಧಾನ್ಯ ಪಡೆದಿರಬೇಕು ಎಂದು ಹೇಳಲಾಗಿದೆ.
ಪಡಿತರ ಅಗತ್ಯವಿರುವ ಕುಟುಂಬಗಳಿಗೆ ಮಾತ್ರ ನಗದು ವರ್ಗಾವಣೆ ಮಾಡಲು ಯೋಜನೆ ರೂಪಿಸಿರುವ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಇಂದಿನಿಂದ ಹಣ ವರ್ಗಾವಣೆ ಮಾಡಲಾಗುವುದು.
5 ಕೆಜಿ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಆಹಾರ ಇಲಾಖೆ ತಂತ್ರಾಂಶದಲ್ಲಿ ಲಭ್ಯವಿರುವ ದತ್ತಾಂಶ ಮಾಹಿತಿ ಬಳಸಿಕೊಂಡು ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಲಾಗುವುದು.
ಪಡಿತರ ಚೀಟಿದಾರರು ಪ್ರತ್ಯೇಕ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಿಲ್ಲ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳ ಕುಟುಂಬಗಳು ಅಕ್ಕಿ ಬದಲಿಗೆ ಹಣ ಪಡೆಯಲು ಅರ್ಹರಾಗಿರುವುದಿಲ್ಲ. ಕುಟುಂಬದ ಮುಖ್ಯಸ್ಥರನ್ನು ಗುರುತಿಸದ ಮತ್ತು ಒಂದಕ್ಕಿಂತಲೂ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವವರು ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಆಗಬೇಕಿದೆ ಎಂದು ಹೇಳಲಾಗಿದೆ.