ಬೆಂಗಳೂರು: ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ವಿರೋಧಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಅಕ್ಕಿ ಸಿಗದಿದ್ದರೆ ರಾಜ್ಯ ಸರ್ಕಾರ ರೈತರಿಂದ ನೇರವಾಗಿ ರಾಗಿ, ಜೋಳ. ಗೋಧಿ ಖರೀದಿಸಿ ವಿತರಿಸಬೇಕು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ಟನ್ ರಾಗಿ ದಾಸ್ತಾನು ಇದ್ದು, ಅಕ್ಕಿ ಬದಲು ಪರ್ಯಾಯವಾಗಿ ಮೂರು ಕೆಜಿ ರಾಗಿ, 2 ಕೆಜಿ ಗೋಧಿ ಅಥವಾ ಜೋಳ ವಿತರಿಸಿದಲ್ಲಿ ಪಡಿತರದಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಡಿತರ ವಿತರಿಸುವುದರಿಂದ ಪಡಿತರ ವಿತರಕರಿಗೆ ಕಮಿಷನ್ ಹಣ ಸಿಗುತ್ತದೆ. ಹಮಾಲಿಗಳಿಗೂ ಕೆಲಸ ಸಿಗುತ್ತದೆ. ಲಾರಿ ಮಾಲೀಕರಿಗೆ ಸಾಗಣೆ ವೆಚ್ಚ ದೊರೆಯುತ್ತದೆ. ಪ್ರತಿ ಕ್ವಿಂಟಾಲ್ ಪಡಿತರ ವಿತರಣೆಗೆ 124 ರೂಪಾಯಿ ಸಿಗುತ್ತಿದ್ದು, 10 ಕೆಜಿ ಪಡಿತರ ವಿತರಿಸಿದರೆ ಹೆಚ್ಚು ಕಮಿಷನ್ ಸಿಗುತ್ತಿತ್ತು. ಆದರೆ, ಹಣ ಕೊಟ್ಟರೆ ನಮ್ಮ ಕಮಿಷನ್ ಗೆ ಕತ್ತರಿ ಬೀಳುತ್ತದೆ. ಪಡಿತರ ಚೀಟಿದಾರರಿಗೆ ಹಣದ ಬದಲಿಗೆ ಬೇರೆ ಧಾನ್ಯ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ಕಿ ಬದಲಿಗೆ ಉಪ್ಪು, ಸಕ್ಕರೆ, ಬೇಳೆ, ಗೋಧಿ ಸೇರಿಸಿ ಕೊಟ್ಟರೆ ಪ್ರತಿ ಕಾರ್ಡ್ ಗೆ ಅಂದಾಜು 400 ರಿಂದ 480 ರೂ. ವೆಚ್ಚವಾಗಲಿದ್ದು, ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಪ್ರತಿ ಕುಟುಂಬಕ್ಕೆ 2,000 ರೂ. ನೀಡುವುದಾಗಿ ಸರ್ಕಾರ ಘೋಷಿಸಿದ್ದು, ಹೀಗಿರುವಾಗ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಛತ್ತಿಸ್ಗಢ, ಪುದುಚೇರಿಯಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಜಾರಿಗೆ ತಂದು ಕೆಲವೇ ತಿಂಗಳಲ್ಲಿ ಸ್ಥಗಿತವಾಗಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.