ಪಡಿತರ ಚೀಟಿದಾರರಿಗೆ ತಿದ್ದುಪಡಿಗೆ ಅವಕಾಶ ನೀಡಿದ್ದರೂ ಅರ್ಜಿ ಸಲ್ಲಿಸಲು ಜನರು ಪರದಾಟ ನಡೆಸುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ, ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ.
ದಿನವಿಡೀ ಕಾದರೂ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದ ಜನ ಕಾಯುವಂತಾಗಿದೆ. ಭಾನುವಾರದಿಂದ ಮೂರು ದಿನಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬೆಳಗಾವಿ, ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ.
ಕೊಟ್ಟಿರುವ ಮೂರು ದಿನದಲ್ಲಿ ಎರಡು ದಿನ ಸರ್ವರ್ ಸಮಸ್ಯೆಯಲ್ಲೇ ಕಳೆದು ಹೋಗಿದ್ದು, ಇನ್ನೊಂದು ದಿನದಲ್ಲಿ ಅರ್ಜಿ ಸಲ್ಲಿಸುವುದು ಅಸಾಧ್ಯವೆನ್ನಲಾಗಿದೆ. ಸರ್ವರ್ ಒತ್ತಡ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ವಿಭಾಗವಾರು ಜಿಲ್ಲೆಗಳಿಗೆ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಿದೆ. ಅಕ್ಟೋಬರ್ 8 ರಿಂದ 10ರವರೆಗೆ ಬೆಳಗಾವಿ, ಮೈಸೂರು ವಿಭಾಗದ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದ್ದರೂ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಪಡಿತರ ಚೀಟಿ ತಿದ್ದುಪಡಿಗೆ ನೀಡಿರುವ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.