ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿದ್ದ 10 ಕೆಜಿ ಅಕ್ಕಿ ಬದಲಿಗೆ ಇನ್ನು ಮುಂದೆ ಕೇವಲ ಆರು ಕೆಜಿ ಅಕ್ಕಿ ನೀಡಲಾಗುವುದು.
ಕೇಂದ್ರ ಸರ್ಕಾರ ನೀಡುವ 5 ಕೆಜಿ ಉಚಿತ ಅಕ್ಕಿಗೆ ರಾಜ್ಯ ಸರ್ಕಾರ ಒಂದು ಕೆಜಿ ಸೇರಿಸಿ ಆರು ಕೆಜಿ ಅಕ್ಕಿ ವಿತರಿಸಲಿದೆ. ಕೊರೊನಾ ಹಿನ್ನೆಲೆಯಲ್ಲಿ 2020 ಸಾಲಿನ ಮೇ ತಿಂಗಳಿಂದ 2022ರ ಡಿಸೆಂಬರ್ 31 ರವರೆಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ವಿತರಿಸುತ್ತಿದ್ದ ತಲಾ 5 ಕೆಜಿ ಅಕ್ಕಿಯನ್ನು ಡಿಸೆಂಬರ್ 31ಕ್ಕೆ ಅಂತ್ಯಗೊಳಿಸಿದೆ.
ರಾಜ್ಯ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅನ್ವಯ ವಿತರಿಸುತ್ತಿದ್ದ ಅಕ್ಕಿಯನ್ನು ಸ್ಥಗಿತಗೊಳಿಸಿದೆ. ಕೇಂದ್ರ ಸರ್ಕಾರ ಉಚಿತವಾಗಿ ಫಲಾನುಭವಿಗಳಿಗೆ ತಲಾ ಇದು ಕೆಜಿ ಅಕ್ಕಿಯನ್ನು ವಿತರಿಸಲಿದೆ. ರಾಜ್ಯ ಸರ್ಕಾರ ಕೇಂದ್ರದ ಪಾಲಿನ ಜೊತೆಗೆ ಹೆಚ್ಚುವರಿ ಆಗಿ ಕೇವಲ ಒಂದು ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲು ಆದೇಶ ಹೊರಡಿಸಿದ್ದು ಜನವರಿ ಇಲ್ಲವೇ ಫೆಬ್ರವರಿಯಿಂದ ಹೊಸ ಆದೇಶ ಜಾರಿಗೆ ಬರಲಿದೆ.
ರಾಜ್ಯದಲ್ಲಿ 10,91,508 ಅಂತ್ಯೋದಯ ಕಾರ್ಡುಗಳು, 1,15,93,227 ಬಿಪಿಎಲ್ ಕಾರ್ಡ್ ಗಳಿದ್ದು,4,32,63,720 ಫಲಾನುಭವಿಗಳು ಪ್ರತಿ ತಿಂಗಳು 6 ಕೆಜಿ ಅಕ್ಕಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.