ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣ ಗಣನೆ ಆರಂಭವಾಗಿದೆ. ಐತಿಹಾಸಿಕ ಕ್ಷಣಕ್ಕಾಗಿ ದೇಶಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ. ನಾಳೆ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಹಲವು ರಾಜ್ಯಗಳು ಶಾಲಾ-ಕಾಲೇಜುಗಳಿಗೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿವೆ. ಕೇಂದ್ರ ಸರ್ಕಾರ ಅರ್ಧದಿನ ರಜೆ ಘೋಷಣೆ ಮಾಡಿದೆ. ಈ ನಡುವೆ ಕರ್ನಾಟಕ ಸರ್ಕಾರವೂ ರಜೆ ಘೋಷಣೆ ಮಾಡುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ನಾಳೆ ಜನವರಿ 22ರಂದು ಸರ್ಕಾರಿ ರಜೆ ಘೋಷಿಸುವಂತೆ ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಭಕ್ತಿ, ಗೌರವ ಎನ್ನುವುದು ಪ್ರಚಾರಕ್ಕಲ್ಲ ಎಂದು ಟಾಂಗ್ ನೀಡಿದ್ದಾರೆ.
ನಾವು ಭಕ್ತಿ, ಗೌರವ, ಧರ್ಮ ಪ್ರಚಾರಕ್ಕಾಗಿ ಮಾಡುವುದಲ್ಲ. ದೇಗುಲಗಳಲ್ಲಿ ಏನು ಆಚರಣೆ ಮಾಡಬೇಕು ಮಾಡುತ್ತಾರೆ. ಏನು ಪೂಜೆ, ಪುನಸ್ಕಾರ ಮಾಡಬೇಕು ಅದನ್ನು ಮಾಡುತ್ತಾರೆ. ಪ್ರಾರ್ಥನೆಯಿಂದ ಫಲ ದೊರೆಯುತ್ತದೆ ಎಂಬ ನಂಬಿಕೆ ನಮಗಿದೆ. ಹಾಗಾಗಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇವೆ ಎಂದರು.
ಆದರೆ ನಮಗೆ ಹೀಗೇ ಮಾಡಿ ಎಂದು ಯಾರೂ ಹೇಳಿಕೊಡಬೇಕಿಲ್ಲ. ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ, ಒತ್ತಡವನ್ನೂ ಹಾಕಬೇಕಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು. ಧರ್ಮದಲ್ಲಿ ರಾಜಕಾರಣವಲ್ಲ ಎಂದು ಹೇಳಿದ್ದಾರೆ. ಈ ಮೂಲಕ ನಾಳೆ ರಜೆ ನೀಡಲು ಪರೋಕ್ಷವಾಗಿ ನಿರಾಕರಿಸಿದ್ದಾರೆ.