ಬೆಂಗಳೂರು: ರಾಜ್ಯಸಭಾ ಚುನಾವಣೆ ಮತದಾನ ಆರಂಭವಾಗಿದ್ದು, ಇನ್ನೊಂದೆಡೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ-ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಹೇಳುತ್ತಿದ್ದಾರೆ. ಇವರಿಗೆ ಕಾಮನ್ ಸೆನ್ಸ್ ಇದೆಯೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಸ್ವಲ್ಪ ಬೇಸಿಕ್ ಕಾಮನ್ ಸೆನ್ಸ್ ಇರಬೇಕು. 136 ಶಾಸಕರು ಗೆದ್ದು ಆಡಳಿತ ನಡೆಸುತ್ತಿದ್ದೇವೆ. ಆದರೂ ಬಿಜೆಪಿ ನಾಯಕರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಹಿರಿಯ ಶಾಸಕರು ಶಾಮನೂರು ಶಿವಶಂಕರಪ್ಪ ಅವರಿಗೆ ನಿನ್ನೆ ಬಿಎಸ್ ವೈ ಕರೆ ಮಾಡಿ ಮತ ಹಾಕಲು ಹೇಳಿದ್ದಾರೆ. ಅಂತಹ ಹಿರಿಯ ನಾಯಕರನ್ನೂ ಬಿಡುತಿಲ್ಲ. ಇನ್ನು ಬೇರೆ ಶಾಸಕರನ್ನು ಸಂಪರ್ಕಿಸದೇ ಇರುತ್ತಾರಾ? ನಮ್ಮ 42 ಶಾಸಕರನ್ನು ಬಿಜೆಪಿ-ಜೆಡಿಎಸ್ ನಾಯಕರು ಸಂಪರ್ಕಿಸಿದ್ದಾರೆ. ಇಲ್ಲಿ ಗೆದ್ದಿರುವ ಶಾಸಕರನ್ನು ಹಣ ಕೊಟ್ಟು ಕುದುರೆ ವ್ಯಾಪಾರ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಮ್ಮನೇ ದುಡ್ಡಿದೆ, ಹಣವಿದೆ ಎಂದು ಅವರನ್ನು ಹೆದರಿಸಿ ಬೆದರಿಸಿ ವೋಟ್ ಹಾಕಿ ಅನ್ನುವುದು ಸರಿಯಲ್ಲ. ಹಣ ಇದೆ ಎಂದು ಕುದುರೆ ವ್ಯಾಪಾರ ಮಾಡ್ತಿದ್ದಾರೆ. ನೆಂಟಸ್ತನ ಬೇರೆ, ಬೀಗತನ ಬೇರೆ, ರಾಜಕಾರಣ ಬೇರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.