ಮೋದಿ ಉಪನಾಮ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಅವರಿಗೆ ಈಗ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದೆ. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ಸೂರತ್ ಶಾಸಕ ಪೂರ್ಣೇಶ್ ಮೋದಿ ದಾಖಲಿಸಿದ್ದ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಈ ಕಾರಣಕ್ಕಾಗಿ ಅವರು ಸಂಸತ್ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದರು.
ಹೀಗಾಗಿ ಇದಕ್ಕೆ ತಡೆ ನೀಡಲು ಕೋರಿ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಇದಕ್ಕೆ ನಿರಾಕರಿಸಿರುವುದರಿಂದ ತೀವ್ರ ಹಿನ್ನಡೆಯಾಗಿದೆ. ಒಂದೊಮ್ಮೆ ನ್ಯಾಯಾಲಯ ತಡೆ ನೀಡಿದ್ದರೆ ಸಂಸತ್ ಸದಸ್ಯತ್ವ ಮತ್ತೆ ಲಭಿಸಬಹುದು ಎಂದು ಭಾವಿಸಲಾಗಿತ್ತು.
ಆದರೆ ಈಗ ಇದಕ್ಕೆ ಹಿನ್ನಡೆಯಾಗಿದ್ದು, ಇದೀಗ ರಾಹುಲ್ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮೋದಿ ಹೆಸರಿನವರೆಲ್ಲ ಮೋಸಗಾರರೇ ಆಗಿರುತ್ತಾರಲ್ಲ ಏಕೆ ಎಂದು ರಾಹುಲ್ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.