ಬೆಂಗಳೂರು: ಎಷ್ಟು ಕೊಟ್ಟು ವಿಪಕ್ಷ ನಾಯಕನಾಗಿ ಬಂದ್ರೀ? ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಎಐಸಿಸಿ ಅಧ್ಯಕ್ಷರಾಗಲು ಪ್ರಿಯಾಂಕ್ ತಂದೆ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕೊಟ್ಟು ಅಧಿಕಾರ ಪಡೆಯುವುದು ಕಾಂಗ್ರೆಸ್ ಸಂಸ್ಕೃತಿ. ಸಿಎಂ ಆಗಲು ಸಿದ್ದರಾಮಯ್ಯ ಎಷ್ಟು ಹಣ ಕೊಟ್ಟಿದ್ದಾರೆ? ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಎಷ್ಟು ಕೊಟ್ಟು ಎಐಸಿಸಿ ಅಧ್ಯಕ್ಷರಾದರು? ಸಾವಿರಾರು ಕೋಟಿ ಕೊಟ್ಟು ಹೋಗಿರಬಹುದು ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಕನಕಪುರದಲ್ಲಿ ಸೋತವರಿಗೆ ವಿಪಕ್ಷ ನಾಯಕನ ಸ್ಥಾನ ಎಂಬ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಆರ್.ಅಶೋಕ್, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರಲ್ವಾ? ಅವರನ್ನು ಎಐಸಿಸಿ ಅದ್ಯಕ್ಷರನ್ನಾಗಿ ಮಾಡಿದ್ದೀರಾ? ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ನಾನು ಕನಕಪುರದಲ್ಲಿ 55 ಸಾವಿರ ಮತ ಪಡೆದಿದ್ದೇನೆ ಅಂದರೆ ಸಿದ್ದರಾಮಯ್ಯನವರಿಗಿಂತ 20 ಪಟ್ಟು ಹೆಚ್ಚು ಮತ ಪಡೆದಿದ್ದೇನೆ. ಕನಕಪುರದಲ್ಲಿ ಸೋತರೂ ಪದ್ಮನಾಭನಗರದಲ್ಲಿ 7 ಬಾರಿ ಗೆದ್ದಿದ್ದೇನೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆ ಡಿಪಾಸಿಟ್ ಬಂದಿಲ್ಲ. ನಾವು ಗೆದ್ದಿದ್ದಕ್ಕೆ ವಿಪಕ್ಷನಾಯಕನಾಗಿ ಆಯ್ಕೆಯಾಗಿದ್ದು. ಸ್ಮೃತಿ ಇರಾನಿ ವಿರುದ್ಧ ನಿಮ್ಮ ರಾಹುಲ್ ಗಾಂಧಿ ಸೋತಿಲ್ಲವೇ? ಇಂತಹ ನಾಯಕರನ್ನೆಲ್ಲ ಇಟ್ಟುಕೊಂಡು ನನ್ನನ್ನು ಪ್ರಶ್ನೆ ಮಾಡ್ತೀರಾ? ಎಂದು ಕೇಳಿದ್ದಾರೆ.
ನಮ್ಮನ್ನು ವಿಪಕ್ಷ ನಾಯಕರನ್ನಾಗಿ ಮಾಡಿದ್ದು ಸರ್ಕಾರದ ಕಿವಿ ಹಿಂಡಲು. ನಾವು ಕಿವಿ ಹಿಂಡುತ್ತೇವೆ. ಕಿವಿ ಹಿಂಡಿದರೂ ಸರ್ಕಾರ ಕೆಲಸ ಮಾಡದಿದ್ದರೆ ತೆಗೆಯಲು ಯೋಚನೆ ಮಾಡ್ತೇವೆ. ಬಳಿಕ ಸರ್ಕಾರವನ್ನು ಬೀಳಿಸುವ ವ್ಯವಸ್ಥೆ ಅವರೇ ಮಾಡಿಕೊಳ್ತಾರೆ ಎಂದು ಟಾಂಗ್ ನೀಡಿದ್ದಾರೆ.