ಡಿ.ಕೆ.ಶಿವಕುಮಾರ್ ಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ; ಸಿಎಂ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಬ್ಯುಸಿಯಿರುವ ಡಿಸಿಎಂಗೆ ಡ್ಯಾಂ ರಿಪೇರಿ ಮಾಡಿಸಲು ಸಮಯ ಎಲ್ಲಿದೆ? ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತುಂಡಾಗಿ ಪ್ರವಾಹ ಭೀತಿ ಎದುರಾಗಿ, ಅತ್ತ ರೈತರು, ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತ ಆಡಳಿತ ಹಾಗೂ ವಿಪಕ್ಷ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ತುಂಗಭದ್ರಾ ಡ್ಯಾಂ ಗೇಟ್ ಕಟ್ ಆಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ ಚೈನ್‌ ಲಿಂಕ್ ಮುರಿದು ಬಿದ್ದಿದ್ದು, ಡ್ಯಾಂನ ಹೊರ ಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ ಎಂದಿದ್ದಾರೆ.

ಕಳೆದ ವರ್ಷವೆಲ್ಲ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯುೂ ಸಹ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದಾರೆ.

ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ. ಪ್ರಜೆಗಳ ಹಿತಕ್ಕಿಂತ, ಪಕ್ಷದ ಹಿತವೇ ಆದ್ಯತೆಯಾಗಿದೆ. ಭ್ರಷ್ಟಾಚಾರ, ರಾಜಕೀಯ ಮೇಲಾಟ, ಬಣ ಬಡಿದಾಟ, ಪಕ್ಕದ ರಾಜ್ಯಗಳ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿಗಳಿಗೆ ಇಲಾಖೆಯ ಕರ್ತವ್ಯ ನಿರ್ವಹಿಸಲು ಪಾಪ ಸಮಯ ಎಲ್ಲಿದೆ? ಎಂದು ಲೇವಡಿ ಮಾಡಿದ್ದಾರೆ.

ಕಾಲಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಡ್ಯಾಂನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನ ಹರಿಸದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ಬರಗಾಲದಿಂದ ಜಲಾಶಯ ಖಾಲಿಯಾಗಿದ್ದಾಗ ಡ್ಯಾಂನ ದುರಸ್ತಿ ಕಾರ್ಯ ಮಾಡಲು ಸಮಯವೂ ಇತ್ತು, ಅವಕಾಶವೂ ಇತ್ತು. ಆದರೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಸದಾಕಾಲ ಬ್ಯುಸಿಯಾಗಿರುವ ಡಿಸಿಎಂ ಸಾಹೇಬರಿಗೆ ಡ್ಯಾಂ ರಿಪೇರಿ ಮಾಡಿಸಲು ಸಮಯ ಎಲ್ಲಿದೆ? ಆಸಕ್ತಿ ಎಲ್ಲಿದೆ? ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಅಧಿಕಾರದ ತೆವಲಿಗೆ ರೈತರ ಬದುಕಿನ ಜೊತೆ ಇನ್ನೆಷ್ಟು ದಿನ ಹೀಗೆ ಚೆಲ್ಲಾಟವಾಡುತ್ತೀರಿ? ನಿಮ್ಮ ದುರಾಡಳಿತದಿಂದ ಉತ್ತಮ ಮಳೆಯಾಗಿದ್ದರೂ ಇವತ್ತು ನಾಡಿನ ರೈತರು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ನಿಮ್ಮ ದುರಾಡಳಿತದಿಂದ ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ ಬೇಕಿದೆ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read