ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನರು ತತ್ತರಿಸಿದ್ದಾರೆ. ರೈತರು ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ. ನೀರಿನ ಸಮಸ್ಯೆ ನಿವಾರಿಸದೇ, ಬರ ಪರಿಹಾರ ಬಿಡಿಗಾಸು ನೀಡದೇ ಇಡೀ ಕಾಂಗ್ರೆಸ್ ಸರ್ಕಾರವೇ ದೆಹಲಿಗೆ ಹೋಗಿ ಕುಳಿತಿದೆ. ಕೇಂದ್ರದ ವಿರುದ್ಧ ಪ್ರತಿಭಟನೆ ಹೆಸರಲ್ಲಿ ಮಜಾ ಮಾಡಲು ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಮ ಮಂದಿರ ನಿರ್ಮಾಣವಾಗಿರುವುದನ್ನು ನೋಡಿ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇವರಿಗೆ ಕ್ಯಾಬಿನೇಟ್ ದರ್ಜೆ ಕೊಡಲು ಹಣವಿದೆ. ಬರ ಪರಿಹಾರ ನೀಡಲು ಹಣವಿಲ್ಲ. ಅದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಾ ಅನುದಾನದಲ್ಲಿ ತಾರತಮ್ಯವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಲೋಕಸಭೆಯಲ್ಲಿ, ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಚಕಾರವೆತ್ತಿಲ್ಲ. ಸಂಸತ್ತಿನಿಂದ ಹೊರಗೆ ಬಂದು ವೈಲೆಂಟ್ ಆಗುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಕಳೆದ 8 ತಿಂಗಳಿಂದ ಮರೆವಿನ ಕಾಯಿಲೆ ಇದೆ. ಹೆಸರಿಗೆ ಮಾತ್ರ ಅವರು ಸಿಎಂ ಆಗಿದ್ದಾರೆ. 136 ಕಾಂಗ್ರೆಸ್ ಶಾಸಕರು ಪ್ರತಿಭಟನೆ ಹೆಸರಲ್ಲಿ ಮಜಾ ಮಾಡಲು ದೆಹಲಿಗೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.