ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಮರುಸೇರ್ಪಡೆಯಾಗಿರುವ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಆರ್.ಅಶೋಕ್, ಯೋಗೇಶ್ವರ್ ಮೊದಲಿನಿಂದಲೂ ಎಲ್ಲಾ ಪಕ್ಷಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಅವರು ಕಾಟಾಚಾರಕ್ಕೆ ನಮ್ಮೊಂದಿಗೆ ಇದ್ದರು ಅನಿಸುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಬಿಜೆಪಿ ಕಟ್ಟಾಳು ಅಲ್ಲ, ಆದರೂ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ನಮ್ಮ ನಂಬಿಕೆಗೆ ಅಪಚಾರ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಗೆ ಸೇರಿ ಯೋಗೇಶ್ವರ್ ತಮ್ಮ ರಾಜಕೀಯ ಭವಿಷ್ಯ ಹಾಳುಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಹಳಷ್ಟು ಜನರು ಪಕ್ಷ ತೊರೆದು ಕಾಂಗ್ರೆಸ್ ಗೆ ಹೋಗಿದ್ದಾರೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಂತ್ರಿ ಮಾಡಿದ್ದಾರಾ? ಜಗದೀಶ್ ಶೆಟ್ಟರ್ ಅವರೂ ಹೋಗಿದ್ದರು ಯಾವ ಸ್ಥಾನ ಕೊಟ್ಟಿದ್ದರು? ಸಿ.ಪಿ.ಯೋಗೇಶ್ವರ್ ಸೈಕಲ್ ಗುರುತು, ಬಿಎಸ್ ಪಿ ಎಲ್ಲಾ ಪಕ್ಷಗಳನ್ನು ಮುಗಿಸಿಕೊಂಡು ಬಿಜೆಪಿಗೆ ಬಂದಿದ್ದರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿದ್ದವರಲ್ಲ. ನಾನು ಹಾಗೂ ಪ್ರಹ್ಲಾದ್ ಜೋಶಿ ಯೋಗೇಶ್ವರ್ ಗೆ ಜೆಡಿಎಸ್ ಗೆ ಟಿಕೆಟ್ ಅಂತ ಹೇಳಿದ್ವಿ. ಕುಮರಸ್ವಾಮಿಯವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೂ ಯೋಗೇಶ್ವರ್ ಒಪ್ಪಿಲ್ಲ. ಈಗ ಕಾಂಗ್ರೆಸ್ ಗೆ ಹೋಗಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದರು.