ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ರಾಜ್ಯಾದ್ಯಂತ ಇಂದಿನಿಂದ ಮಾರ್ಚ್ 29 ರವರೆಗೆ ನಡೆಯಲಿದೆ. 7.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 3,63,698 ವಿದ್ಯಾರ್ಥಿಗಳು, 3,62,497 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಬೆಳಗ್ಗೆ 10.15 ರಿಂದ ಮಧ್ಯಾಹ್ನ 1:30ರ ವರೆಗೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಮೊಬೈಲ್ ನಿಷೇಧ ಮೊದಲಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಹಿಜಾಬ್ ಸೇರಿ ಯಾವುದೇ ಧರ್ಮಾಧಾರಿತ ಉಡುಪು ಧರಿಸಿ ಬರುವಂತಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕೆ ಒಂದು ಗಂಟೆ ಮೊದಲು ಕೇಂದ್ರಕ್ಕೆ ಹೋಗಿ, ಹಾಲ್ ಟಿಕೆಟ್, ಪೆನ್ನು ತೆಗೆದುಕೊಂಡು ಹೋಗಿ. ಮೊಬೈಲ್, ವಾಚ್ ಕ್ಯಾಲ್ಕುಲೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋಗಬೇಡಿ. ಈ ಬಾರಿ ಒಂದು ಅಂಕದ ಬಹು ಆಯ್ಕೆ ಮಾದರಿಗಳು ಪ್ರಶ್ನೆಗಳು ಹೆಚ್ಚಾಗಿರುತ್ತವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭವಾಗಲಿ.