ಬೆಂಗಳೂರು: ದಲಿತರ ಜಮೀನು ರಕ್ಷಣೆಗೆ ಕಾಯ್ದೆಗೆ ಶೀಘ್ರವೇ ತಿದ್ದುಪಡಿ ತರಲಾಗುವುದು. ಈ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರು, ಅಧಿಕಾರಿಗಳು, ಕಾನೂನು ತಜ್ಞರು, ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ, ದಲಿತರ ಜಮೀನು ಹಕ್ಕು ಕಾಪಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂಮಿ ಪರಭಾರೆ ನಿಷೇಧ ಕಾಯ್ದೆಗೆ ಹೊಸದಾಗಿ ಕೆಲವು ಅಂಶಗಳನ್ನು ಸೇರಿಸಿ ಪ್ರಸಕ್ತ ವಿಧಾನ ಮಂಡಲ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆ ಮಂಡಿಸುವುದಾಗಿ ತಿಳಿಸಿದ್ದಾರೆ.
ಭೂ ರಹಿತ ದಲಿತರಿಗೆ ಸರ್ಕಾರದಿಂದ ಜಮೀನು ಮಂಜೂರು ಮಾಡಲಿದ್ದು, ಸರ್ಕಾರದ ಸಮ್ಮತಿ ಇಲ್ಲದೆ ಅದನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದರೆ ಕೇಸ್ ದಾಖಲಿಸಿ ದಲಿತರು ಹಿಂಪಡೆದುಕೊಳ್ಳಬಹುದು. ಈ ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಯ್ದೆಯಲ್ಲಿ ಕಾಲಮಿತಿ ಇಲ್ಲ. ಈ ಪ್ರತಿಕೂಲ ಅಂಶದಿಂದಾಗಿ ಸುಪ್ರೀಂಕೋರ್ಟ್ ನಲ್ಲಿ ದಲಿತರ ಪ್ರಕರಣಕ್ಕೆ ಸೋಲಾಗುತ್ತಿದ್ದು, ಹೀಗಾಗಿ ಕಾಲಮಿತಿ ಆಗತ್ಯವಿಲ್ಲ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ.