ಈ ವರ್ಷದ ಕೊನೆಯಲ್ಲಿ ಹರಿಯಾಣದಲ್ಲಿ ಚುನಾವಣೆ ನಡೆಯಲಿದ್ದು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಒತ್ತಾಯಿಸಲು ಸಾವಿರಾರು ರಾಜ್ಯ ಸರ್ಕಾರಿ ನೌಕರರು ಭಾನುವಾರ ಪಂಚಕುಲದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಸಾವಿರಾರು ಸರ್ಕಾರಿ ನೌಕರರು ಬೀದಿಗಿಳಿದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿವಾಸದತ್ತ ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ತಡೆದ ಹರಿಯಾಣ ಪೊಲೀಸರು ಅವರನ್ನು ಚದುರಿಸಲು ಜಲಫಿರಂಗಿ ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದರು.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ಯೋಜನೆಯನ್ನು ಪರಿಚಯಿಸಿರುವುದರಿಂದ ಹರ್ಯಾಣದ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಒತ್ತಾಯಿಸುತ್ತಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಾಲುದಾರರಾಗಿರುವ ಜಾರ್ಖಂಡ್‌ನಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಸಹ ಪರಿಚಯಿಸಲಾಗಿದೆ. ಎಎಪಿ ಆಡಳಿತವಿರುವ ಪಂಜಾಬ್‌ನಲ್ಲೂ ಇದು ಜಾರಿಯಲ್ಲಿದೆ.
ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದೇಶದ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿಗಳು ನೀಡುವ ಹೇಳಿಕೆಗಳು ತಾರ್ಕಿಕವಾಗಿಲ್ಲ. ಏಕೆಂದರೆ ರಾಜ್ಯದ ಶಾಸಕರು ಮತ್ತು ಸಂಸದರು ಬಹು ಪಿಂಚಣಿ ಪಡೆಯುತ್ತಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಮುಖಂಡರು ಹೇಳಿದ್ದಾರೆ.
ನೌಕರರ ಸಂಘದ ನಾಯಕ ವಿಜೇಂದರ್ ಧಾರಿವಾಲ್ ಮಾತನಾಡಿ, 2018 ರಿಂದ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ನೌಕರರು ಒತ್ತಾಯಿಸುತ್ತಿದ್ದೇವೆ ಚುನಾವಣೆ ಸಮೀಪದಲ್ಲಿದೆ ಎಂದು ಒತ್ತಾಯಿಸುತ್ತಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದೆ ನಮ್ಮನ್ನು ಹತ್ತಿಕ್ಕಲು ಯತ್ನಿಸಿದೆ ಎಂದು ದೂರಿದ್ದಾರೆ.