ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರತಿ ತಿಂಗಳು ಗೌರವ ಧನ ನೀಡಲು ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವರು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಮೂರು ತಿಂಗಳಿಗೊಮ್ಮೆ ಗೌರವಧನ ನೀಡುತ್ತಿದ್ದು, ಇದನ್ನು ತಿಂಗಳಿಗೊಮ್ಮೆ ಕೊಡಲು ಕ್ರಮ ಕೈಗೊಳ್ಳುತ್ತೇವೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಸ್ ಪಾಸ್ ನೀಡುವ ಬಗ್ಗೆಯೂ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇಲಾಖೆಯಲ್ಲಿ ನಾನಾ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವುದರಲ್ಲಿ ಅಕ್ರಮವಾಗಿಲ್ಲ ಎಂದು ಸದನ ಸಮಿತಿ ವರದಿ ನೀಡಿದೆ. 2014ರಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ಠೇವಣಿ ಹಗರಣ ಬಗ್ಗೆ ಆಗಿನ ಸಚಿವ ಹೆಚ್.ಕೆ. ಪಾಟೀಲ್ ಪ್ರಸ್ತಾಪಿಸಿದ್ದರು. ಮೂರು ಬ್ಯಾಂಕುಗಳಲ್ಲಿ ಠೇವಣಿ ಇಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, 98 ಬ್ಯಾಂಕುಗಳಲ್ಲಿ ಠೇವಣಿ ಇರುವುದು ಬೆಳಕಿಗೆ ಬಂದಿತ್ತು. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 612 ಕೋಟಿ ರೂ. ಠೇವಣಿ ಪತ್ತೆಯಾಗಿದ್ದು, ಸಂಪುಟದ ನಿರ್ಣಯದಂತೆ ಅದನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಕೆನರಾ ಬ್ಯಾಂಕ್ ನಿಂದ ಬಡ್ಡಿ ಹಣ 103.97 ಕೋಟಿ ರೂ. ಬರುವುದು ಬಾಕಿ ಇದ್ದು, ಅದನ್ನು ಪಡೆಯಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.