ಬೆಂಗಳೂರು: ಖಾಸಗಿ ಸಾರಿಗೆ ವಾಹನ ಸೆ.11ರಂದು ಸೋಮವಾರ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುವುದರಲ್ಲಿ ಸಂಶಯವಿಲ್ಲ, ಅಲ್ಲದೇ ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ.
ಟ್ಯಾಕ್ಸಿ, ಆಟೋ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ಗಳು ಸಂಪೂರ್ಣ ಬಂದ್ ಆಗಲಿದ್ದು, 30ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿವೆ. ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ನಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಬಿಎಂಟಿಸಿ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲು ನಿರ್ಧರಿಸಿದೆ.
ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳು ಬಂದ್ ಆಗಲಿದ್ದು, ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ಮುಷ್ಕರ ನಡೆಯಲಿದೆ. ಶಾಲಾ ವಾಹನಗಳೂ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಶಾಲಾ ವಾಹನಗಳು ನಾಳೆ ಬಂದ್ ಆಗಲಿವೆ.
ನಮ್ಮ ಬೇಡಿಕೆಗಳಿಗೆ ಸಾರಿಗೆ ಸಚಿವರು, ಇಲಾಖೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಬಂದ್ ಅನಿವಾರ್ಯವಾಗಿದೆ. ಬಂದ್ ನಿಂದಾಗಿ ಜನರಿಗೆ ತೊಂದರೆಯಾಗುವುದು ನಿಜ. ಆದರೆ ಹಲವಾರು ದಿನಗಳಿಂದ ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ನೀಗಿಸಲು ಒಂದು ದಿನದ ಮಟ್ಟಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷರು ಮನವಿ ಮಾಡಿದ್ದಾರೆ.