ಬೆಂಗಳೂರು: 2024 -25ನೇ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದು, ಕೆಲವು ಶಾಲೆಗಳಲ್ಲಿ ಶೇಕಡ 20 ರಿಂದ 30ರಷ್ಟು ಶುಲ್ಕ ಹೆಚ್ಚಳ ಮಾಡುವ ಮೂಲಕ ಪೋಷಕರಿಂದ ಸುಲಿಗೆ ಮಾಡಲಾಗುತ್ತಿದೆ.
ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕ ಪಾವತಿಸಬೇಕೆಂದು ಕೆಲವು ಖಾಸಗಿ ಶಾಲೆಗಳು ಒತ್ತಾಯಿಸುತ್ತಿದ್ದು, ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಸಿಬಿಎಸ್ಇ, ಐಸಿಎಸ್ಇ, ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಮೊದಲು ಕನಿಷ್ಠ 2ರಿಂದ ಗರಿಷ್ಠ 4, ಕೆಲವು ಪ್ರಕರಣಗಳಲ್ಲಿ ಇನ್ನೂ ಹೆಚ್ಚಿನ ಕಂತಿನಲ್ಲಿ ಶುಲ್ಕ ಪಾವತಿಗೆ ಶಾಲೆಗಳು ಅವಕಾಶ ನೀಡಿದ್ದವು. ಈ ಬಾರಿ ಬಹುತೇಕ ಶಾಲೆಗಳು ಒಂದೇ ಕಂತಿನಲ್ಲಿ ತಪ್ಪಿದಲ್ಲಿ ಎರಡು ಕಂತಿನಲ್ಲಿ ಶುಲ್ಕ ಪಾವತಿಸಬೇಕು ಎಂದು ಒತ್ತಾಯಿತ್ತಿವೆ ಎನ್ನಲಾಗಿದೆ.
ಬೆಂಗಳೂರಿನ ಅನೇಕ ಖಾಸಗಿ ಶಾಲೆಗಳಲ್ಲಿ ಶೇಕಡ 20 ರಿಂದ 30 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಇದೇ ರೀತಿ ರಾಜ್ಯದ ವಿವಿಧೆಡೆಯೂ ಶುಲ್ಕ ಹೆಚ್ಚಳ ಮಾಡಲಾಗಿದೆ. ಕನಿಷ್ಠ 25 ಸಾವಿರದಿಂದ ಗರಿಷ್ಠ 30 ಸಾವಿರ ರೂ. ಇದ್ದ ಶುಲ್ಕವನ್ನು 30 ರಿಂದ 35 ಸಾವಿರ ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಹೆಸರುಗಳಿಸಿದ ಶಾಲೆಗಳಲ್ಲಿ 40 ರಿಂದ 50 ಸಾವಿರ ರೂ.ವರೆಗೆ ಇದ್ದ ಶುಲ್ಕವನ್ನು ಕನಿಷ್ಠ 50ರಿಂದ 65 ಸಾವಿರ ರೂ.ವರೆಗೆ ಹೆಚ್ಚಳ ಮಾಡಲಾಗಿದೆ.
ಭಾರಿ ಬೇಡಿಕೆ ಎಂದು ತೋರಿಸಿಕೊಳ್ಳುವ ಶಾಲೆಗಳಲ್ಲಿ 70 ರಿಂದ 90 ಸಾವಿರ ರೂಪಾಯಿ ಇದ್ದ ಶುಲ್ಕವನ್ನು ಒಂದು ಲಕ್ಷದಿಂದ 1.2 ಲಕ್ಷ ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಬೋಧನಾ ಶುಲ್ಕ, ಕ್ರೀಡಾ ಶುಲ್ಕ ಸೇರಿ ಪಠ್ಯೇತರ ಚಟುವಟಿಕೆಗಳು, ಪಠ್ಯಪುಸ್ತಕ ಮತ್ತು ಸಮವಸ್ತ್ರಕ್ಕೆ ಶುಲ್ಕ ಇದಾಗಿದ್ದು, ಇದರ ಹೊರತಾಗಿ ಸಾರಿಗೆ ವ್ಯವಸ್ಥೆ ಸೇರಿ ಅನೇಕ ಶುಲ್ಕ ಪಾವತಿಸಬೇಕು.
ಖರ್ಚು ವೆಚ್ಚಗಳು ಹೆಚ್ಚಾಗುವುದರಿಂದ ಶೇಕಡ 10 ರಿಂದ 15 ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶವಿದೆ. ಪೋಷಕರಿಗೆ ಹೊರೆಯಾಗುವಂತೆ ಶೇಕಡ 20 ರಿಂದ 30 ರಷ್ಟು ಶುಲ್ಕ ಹೆಚ್ಚಳ ಮಾಡಬಾರದು. ಬಹುತೇಕ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.