ಭೂ ತಾಯಿಯ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಇಂದು ಆಚರಿಸಲಾಗುತ್ತಿದ್ದು, ಇದಕ್ಕಾಗಿ ರೈತ ಸಮುದಾಯ ಸಡಗರ-ಸಂಭ್ರಮದಿಂದ ಸಿದ್ಧತೆ ನಡೆಸುತ್ತಿದೆ. ವಿಧವಿಧವಾದ ಭಕ್ಷ್ಯ ಭೋಜ್ಯಗಳನ್ನು ಮಾಡಿಕೊಂಡು ಭೂತಾಯಿಗೆ ಎಡೆ ಮಾಡಿದ ಬಳಿಕ ಕುಟುಂಬದೊಂದಿಗೆ ಹೊಲದಲ್ಲಿ ಭೋಜನ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಭೂಮಿ ಹುಣ್ಣಿಮೆ ವಿಶೇಷ ಹಬ್ಬವಾಗಿದೆ. ರೈತ ಮಹಿಳೆಯರಿಗೆಲ್ಲಾ ತಮಗೆ ಅನ್ನ ನೀಡುವ, ಬದುಕು ಕೊಡುವ ಈ ಭೂಮಿಗೆ ಪೂಜೆ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭಾವವಿದೆ. ಅಲ್ಲದೆ ಈ ಸಂದರ್ಭದಲ್ಲಿ ಗರ್ಭಿಣಿಯಾದ ಭೂಮಿ ತಾಯಿ ಬಯಕೆಯನ್ನ ತೀರಿಸಬೇಕು ಎಂಬ ನಂಬಿಕೆ ಕೂಡ ಇದೆ. ಹಲವು ಕಡೆ ಭೂಮಿ ಹುಣ್ಣಿಮೆಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸಿದರೂ ಕೂಡ ಒಟ್ಟಾರೆ ಆಶಯ ಒಂದೇ ಆಗಿದೆ.
ಮಲೆನಾಡು ಭಾಗಗಳಲ್ಲಿ ಈ ಆಚರಣೆ ಇನ್ನೂ ವಿಶೇಷವಾಗಿದೆ. ಒಂದು ವಾರದಿಂದಲೇ ಈ ಹಬ್ಬಕ್ಕೆ ಸಿದ್ದ ಮಾಡಿಕೊಂಡಿದ್ದು, ಪೂಜೆಯ ವಿಧಿವಿಧಾನ ಕೂಡ ಬೇರೆಯಾಗಿರುತ್ತದೆ. ಹಲವು ಕಡೆ ಭೂಮಿಯನ್ನು ಅಗೆದು ಎಡೆಯನ್ನು ಇಟ್ಟು, ಮುಚ್ಚಿ ಭೂ ಮಾತೆಗೆ ಉಣ ಬಡಿಸಿದ ತೃಪ್ತಿ ಪಡೆಯುತ್ತಾರೆ.
ರೈತರು ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆಯ ಬಿಸಿ ಕೂಡಾ ತಟ್ಟಿದ್ದು, ಆದರೆ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಆಚರಿಸಲು ರೈತ ಸಮುದಾಯ ಸಿದ್ದತೆ ನಡೆಸಿದೆ. ಇದಕ್ಕೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.