ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಎಸ್ಐಟಿ ತಂಡ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ.
ಇದರ ಮಧ್ಯೆ ಜರ್ಮನಿಯ ಜ್ಯೂರಿಚ್ ನಿಂದ ಬೆಂಗಳೂರಿಗೆ ಬರಲು ಪ್ರಜ್ವಲ್ ರೇವಣ್ಣ ಇಂದು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದ್ದು, ಕಡೆ ಕ್ಷಣದಲ್ಲಿ ಇದನ್ನು ರದ್ದುಪಡಿಸಿದ್ದಾರೆ. ಹೀಗಾಗಿ ಅವರು ಯಾವಾಗ ವಾಪಸ್ ಬರುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.
ಇದರ ಮಧ್ಯೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಇಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆಂಬ ವಿಚಾರ ಅವರ ಮನೆಯವರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿದ್ದಾರೆ. ಅವರನ್ನು ಈಗಾಗಲೇ ಜೆಡಿಎಸ್ ಪಕ್ಷದಿಂದ ಸಸ್ಪೆಂಡ್ ಮಾಡಿದ್ದೇವೆ ಎಂದು ಹೇಳಿದ ಜಿ.ಟಿ. ದೇವೇಗೌಡ, ನಮ್ಮ ಪಕ್ಷದ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರು ಸಹ ಇದೇ ಮಾತನ್ನು ಹೇಳಿದ್ದಾರೆ ಎಂದು ತಿಳಿಸಿದರು.