ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ 2024ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಪ್ರತಿ ವರ್ಷ ಮೇ ಮತ್ತು ಜುಲೈನಲ್ಲಿ ನಡೆಸಬೇಕಾಗಿದ್ದ ವರ್ಗಾವಣೆ ಪ್ರಕ್ರಿಯೆ ಕಾರಣಾಂತರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆಸಲಾಗುತ್ತಿದೆ. ಪ್ರಾಧ್ಯಾಪಕರು ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ವಿಶೇಷ ಪ್ರಕರಣಗಳಡಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದೆ.
ಈ ವಿಶೇಷ ಪ್ರಕರಣಗಳ ಕೌನ್ಸೆಲಿಂಗ್ ಸೆಪ್ಟೆಂಬರ್ 3 ಮತ್ತು 4ರಂದು ನಡೆಯಲಿದೆ. ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಕೌನ್ಸೆಲಿಂಗ್ ಸೆಪ್ಟೆಂಬರ್ 6, 7ರಂದು ನಡೆಯಲಿದೆ. ಇಲಾಖೆಯ ವೆಬ್ಸೈಟ್ ನಲ್ಲಿ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಾಲಕಾಲಕ್ಕೆ ಗಮನಿಸುವಂತೆ ತಿಳಿಸಲಾಗಿದೆ.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಸಾವಿರ ಅತಿಥಿ ಉಪನ್ಯಾಸಕರಿಗೆ ಮುಂದೆ ಸಹ ತಾವು ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿಯೇ ಮುಂದುವರೆಯಲು ಸಾಧ್ಯವಿದೆ. ಇಷ್ಟು ವರ್ಷ ಶೈಕ್ಷಣಿಕಾವಧಿ ಮುಗಿದ ಬಳಿಕ ಅವರನ್ನು ಕೌನ್ಸೆಲಿಂಗ್ ಮೂಲಕ ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ, ಇದಕ್ಕೆ ಅತಿಥಿ ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬವನ್ನು ಬಿಟ್ಟು ಪ್ರತಿ 10 ತಿಂಗಳಿಗೆ ಬೇರೆ ಕಾಲೇಜಿಗೆ ವರ್ಗಾವಣೆಯಾದರೆ ಕಷ್ಟವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅದೇ ಕಾಲೇಜುಗಳಲ್ಲಿ ಮುಂದುವರೆಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.