ಚಿತ್ರದುರ್ಗ: ಶೀಘ್ರವೇ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಆಹ್ವಾನ ಇತ್ತು. ಪಕ್ಷದಲ್ಲಿ ನಿಮ್ಮ ತಂದೆಗೆ ಈ ಹಿಂದೆ ಅನ್ಯಾಯ ಆಗಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದರು ಎಂದು ತಿಳಿಸಿದ್ದಾರೆ.
ವೈಯಕ್ತಿಕವಾಗಿ ಯಾವುದೇ ಬೇಡಿಕೆ ಇಲ್ಲ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ. ನನ್ನದು ಅಭಿವೃದ್ಧಿಪರ ಚಿಂತನೆಯಾಗಿದ್ದು, ಮುಖಂಡರ ಸಭೆಯಲ್ಲಿ ತೀರ್ಮಾನಿಸಿ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಾಗಿ ಹೇಳಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರ ಸಮುದಾಯದ ವಿಷಯದಲ್ಲಿ ಕೊಟ್ಟ ಭರವಸೆ ಉಳಿಸಿಕೊಂಡಿಲ್ಲ. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿ, ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರು ಎಂದು ತಿಳಿಸಿದ್ದಾರೆ.
ಪತಿ ಶ್ರೀನಿವಾಸ್ ಗೆ ವಿಧಾನಪರಿಷತ್ ಚುನಾವಣೆ ಟಿಕೆಟ್ ನೀಡುತ್ತಾರೆ ಎಂದು ನಾನು ಹೋಗುತ್ತಿಲ್ಲ. ಟಿಕೆಟ್ ಕೇಳುವುದು ಶ್ರೀನಿವಾಸ್ ಅವರ ಹಕ್ಕು ಎಂದು ಹೇಳಿದ್ದಾರೆ.