ಬೆಂಗಳೂರು: ಕಳೆದ ಐದು ವರ್ಷಗಳಿಂದ ಒಂದೇ ಪೊಲೀಸ್ ಠಾಣೆ ಅಥವಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರನ್ನು ಬೇರೆಡೆ ವರ್ಗಾಯಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ.
ಎಲ್ಲಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳು ಒಂದೇ ಕಡೆ ಕರ್ತವ್ಯ ನಿರ್ವಹಿಸಲು ಕನಿಷ್ಠ ಮತ್ತು ಗರಿಷ್ಠ ಅವಧಿ ನಿಗದಿಪಡಿಸಿ ಈಗಾಗಲೇ ವರ್ಗಾವಣೆಗೆ ಸೂಚನೆ ನೀಡಲಾಗಿದೆ.
ಆದರೂ, ಅನೇಕ ಘಟಕಗಳಲ್ಲಿ ಸಿಬ್ಬಂದಿಗಳು ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ ಐದು ವರ್ಷ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆಯಾದರೂ ಅದೇ ಠಾಣೆಗೆ ಎರವಲು ಸೇವೆ ಆಧಾರದ ಮೇಲೆ ನಿಯುಕ್ತಿಗೊಳಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಂತಹ ಸಿಬ್ಬಂದಿಯನ್ನು ಬೇರೆ ವರ್ಗಾಯಿಸುವಂತೆ ಘಟಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಒಂದೇ ಘಟಕ ಅಥವಾ ಪೊಲೀಸ್ ಠಾಣೆಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಪಿಸಿ ಹುದ್ದೆಯಿಂದ ಎಎಸ್ಐ ಹುದ್ದೆವರೆಗಿನ ಸಿಬ್ಬಂದಿ ಅಧಿಕಾರಿಗಳನ್ನು ಕೂಡಲೇ ಬೇರೆ ಸ್ಥಳ ಅಥವಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಈ ಕುರಿತು ಏಳು ದಿನಗಳೊಳಗೆ ಕ್ರಮ ಕೈಗೊಂಡು ಕಚೇರಿಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದಾರೆ.