ಬೆಂಗಳೂರು: ಪೊಲೀಸರ ಸೋಲಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಆರೋಪಿ ಬಂಧಿಸಿದ್ದ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರ ವಶದಲ್ಲಿದ್ದಾಗ ಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ಚಂದಾಪುರ ಮಡಿವಾಳದ ತಾವರೆಕೆರೆ ನಿವಾಸಿ ಗಣೇಶ್ ಮೃತಪಟ್ಟ ಕೈದಿ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಡಿಸೆಂಬರ್ 12ರಂದು ರಾತ್ರಿ ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಜೀವ್ ಕುಮಾರ್ ಮನೆಗೆ ನುಗ್ಗಿದ ಆರೋಪಿ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡು ನಿಮ್ಮಿಂದ ನೆರೆಹೊರೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎನ್ನುವ ದೂರು ಬಂದಿದೆ ಎಂದು ಬೆದರಿಸಿ ದಂಪತಿಯಿಂದ 2.5 ಲಕ್ಷ ರೂ. ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ.
ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಗಣೇಶ್ ಗುಪ್ತಾಂಗಕ್ಕೆ ಖಾರದಪುಡಿ ಹಾಕಿ ದೌರ್ಜನ್ಯ ಎಸಗಲಾಗಿದೆ. ನ್ಯಾಯಾಲಯಕ್ಕೆ ಆರೋಪಿ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಕೆಲವು ದಿನಗಳಿಂದ ಗಣೇಶ್ ಗೆ ಊಟ ಸೇರುತ್ತಿರಲಿಲ್ಲ. ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
ಪೊಲೀಸರ ಹಲ್ಲೆ ಮತ್ತು ದೌರ್ಜನ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಜೈಲಿಗೆ ಹೋದ ನಂತರ ಮೃತಪಟ್ಟಿದ್ದಾನೆ. ಐದಾರು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಉಳಿಸಿಕೊಂಡು ಮರ್ಮಾಂಗ, ಗುದದ್ವಾರಕ್ಕೆ ಖಾರದಪುಡಿ ಹಾಕಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಮೃತ ಗಣೇಶ್ ಸ್ನೇಹಿತ ವಿನೋದ್ ಆರೋಪಿಸಿದ್ದಾರೆ.