
ಚಿಕ್ಕಮಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುಜಾಮಿಲ್ ಗೆ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಕೊಡಿಸಿದ್ದು ಪೊಲೀಸ್ ಇನ್ಸ್ಪೆಕ್ಟರ್ ಎನ್ನುವುದು ಗೊತ್ತಾಗಿದೆ.
ಪ್ರಸ್ತುತ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮುಜಾಮಿಲ್ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಆತನಿಗೆ ಮನೆ ಬಾಡಿಗೆ ನೀಡುವಂತೆ ಇನ್ಸ್ಪೆಕ್ಟರ್ ಮಾಲೀಕರಿಗೆ ತಿಳಿಸಿದ್ದರು.
ಇಲ್ಲಿ ಆತನ ತಾಯಿ ಮತ್ತು ತಂಗಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಮುಜಾಮಿಲ್ ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದ. ತನಿಖಾಧಿಕಾರಿಗಳು ಅಯ್ಯಪ್ಪ ನಗರದ ಮನೆಗೆ ಭೇಟಿ ನೀಡಿದ್ದರು. ಎರಡು ಮೂರು ದಿನಗಳಿಂದ ಮನೆಗೆ ಬೀಗ ಹಾಕಲಾಗಿದ್ದು, ಮನೆ ಬಾಡಿಗೆಗೆ ನೀಡುವಂತೆ ಮಾಲೀಕನಿಗೆ ಶಿಫಾರಸು ಮಾಡಿದ್ದ ಇನ್ಸ್ಪೆಕ್ಟರ್ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಜಾಮಿಲ್ ಗೂ ಮತ್ತು ಪೋಲಿಸ್ ಇನ್ಸ್ಪೆಕ್ಟರ್ ಆತ್ಮೀಯತೆ ಇದ್ದ ಶಂಕೆ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.