ತಮ್ಮ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ತಮ್ಮ ಮನೆಗೆಲಸದಾಕೆ ಈಶ್ವರಿ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದರು.
ಪ್ರಕರಣ ಸಂಬಂಧ ತಮಿಳುನಾಡು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಇದೀಗ ತನಿಖೆ ಬಳಿಕ ಐಶ್ವರ್ಯಾರ ಮನೆಗೆಲಸದಾಕೆ ಈಶ್ವರಿ ಮತ್ತಾಕೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ.
ತೇಯ್ನಾಮ್ಪೇಟ್ನಲ್ಲಿರುವ ಐಶ್ವರ್ಯಾ ಮನೆಯಿಂದ ಚಿನ್ನಾಭರಣ ಕಳುವಾದ ಬೆನ್ನಿಗೇ ಈಶ್ವರಿ ಮತ್ತಾಕೆಯ ಪತಿಯ ಖಾತೆಗಳಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇಬ್ಬರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಈಶ್ವರಿ ಚಿನ್ನಾಭರಣಗಳನ್ನು ಮಾರಿ ಅದನ್ನು ನಗದಾಗಿ ಪರಿವರ್ತಿಸಿರುವ ಸಂಗತಿ ತಿಳಿದು ಬಂದಿದೆ.
ಫೆಬ್ರವರಿಯಲ್ಲಿ ಕಳ್ಳತನವಾಗಿದ್ದು, ಐಶ್ವರ್ಯಾ ರಜನಿಕಾಂತ್ಗೆ ಸೇರಿದ 60 ಸವರಿನ್ನಷ್ಟು ಚಿನ್ನ ಕಳುವಾಗಿತ್ತು. ತಮ್ಮ ಮನೆಯೊಳಗೆ ಬಂದು ಹೋಗಲು ಅನುಮತಿ ಪಡೆದಿದ್ದ ತನ್ನ ಚಾಲಕ ಹಾಗೂ ಮನೆಗೆಲಸ ಮಾಡುತ್ತಿದ್ದ ಈಶ್ವರಿ ಹಾಗೂ ಲಕ್ಷ್ಮಿ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದ ಐಶ್ವರ್ಯಾ, ಇವರಿಗೆ ತನ್ನ ಮನೆಯಲ್ಲಿ ಚಿನ್ನ ಇಡುವ ಜಾಗ ಗೊತ್ತಿದ್ದು, ಅವರ ಮೇಲೇ ಶಂಕೆ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದರು.