
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭೂ ಮಂಡಲದಲ್ಲಿಯೇ ಅತಿ ಪ್ರಭಾವಶಾಲಿ ವ್ಯಕ್ತಿ ಎಂದು ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲ್ಮೋರಿಯಾ ಬಣ್ಣಿಸಿದ್ದಾರೆ. ಭಾರತ ಮತ್ತು ಯುಕೆ ನಡುವಿನ ಬಾಂಧವ್ಯದ ಮಹತ್ವವನ್ನು ಕುರಿತು ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಬಾಲ್ಯದಲ್ಲಿ ಗುಜರಾತಿನ ರೈಲು ನಿಲ್ದಾಣದಲ್ಲಿದ್ದ ತಮ್ಮ ತಂದೆಯವರ ಟೀ ಸ್ಟಾಲ್ ನಲ್ಲಿ ಪ್ರಯಾಣಿಕರಿಗೆ ಚಹಾ ಮಾರಾಟ ಮಾಡುತ್ತಿದ್ದರು. ಆ ಹಂತದಿಂದ ಬೆಳೆದು ಇಂದು ಭಾರತದ ಪ್ರಧಾನ ಮಂತ್ರಿಯಾಗುವ ಮೂಲಕ ವಿಶ್ವದಲ್ಲೇ ಅತಿ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿದ್ದಾರೆ.
ಭಾರತ ಈಗ ಜಿ 20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಅಲ್ಲದೆ ಮುಂದಿನ 25 ವರ್ಷಗಳ ದೂರದೃಷ್ಟಿತ್ವವನ್ನು ಇಟ್ಟುಕೊಂಡು ಭಾರತದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗುವತ್ತ ದಾಪುಗಾಲು ಇಟ್ಟಿದೆ ಎಂದು ಲಾರ್ಡ್ ಕರಣ್ ಬಿಲ್ಮೋರಿಯಾ ಹೇಳಿದ್ದಾರೆ.